ಪಡುಬಿದ್ರಿ ಪದ್ರದಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ : ಮುಂಬಯಿಯಲ್ಲಿ ಪೂರ್ವಭಾವಿ ಸಭೆ
ಮುಂಬಯಿ ತುಳು–ಕನ್ನಡಿಗರ ಡಿಗರ ಉದಾರತೆಯಿಂದ ದೈವಸ್ಥಾನ–ದೇವಸ್ಥಾನಗಳು ಬೆಳಗಿವೆ – ನವೀನ್ಚಂದ್ರ ಜೆ ಶೆಟ್ಟಿ
(Mumbai) ಮುಂಬಯಿ: ಪಡುಬಿದ್ರಿಯ ಪದ್ರದಬೆಟ್ಟು ಶ್ರೀ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಳ್ಳಲಿದ್ದು, ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆ ನಿಮಿತ್ತ ಮುಂಬಯಿಯ ಸಾಕಿನಾಕಾ ಪೆನಿನ್ಸುಲಾ ಗ್ರಾಂಡ್ ಹೋಟೆಲ್ನಲ್ಲಿ ಭಾನುವಾರ ನವೀನ್ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಬಡಗು ಬಾರ್ಕೂರಿನಿಂದ ತೆಂಕು ನೀಲೇಶ್ವರದವರೆಗೆ ಬಬ್ಬುಸ್ವಾಮಿಯು ಕಾರಣಿಕ ಮೆರೆದ ಹಲವಾರು ಜಾಗಗಳಲ್ಲಿ ಏಳು ಮಾಗಣಿ ಪಡುಬಿದ್ರಿ ಸೀಮೆಯ ಪದ್ರದಬೆಟ್ಟು ಪಾದೆಬೆಟ್ಟು ಕೂಡ ಒಂದಾಗಿದೆ. ತುಳುನಾಡಿನ ದೈವನುಡಿ ಕಟ್ಟಿನ ಪ್ರಕಾರ ನಮ್ಮ ದೈವಸ್ಥಾನವನ್ನು ಪದ್ರದಬೊಟ್ಟು ಪಾದೆಟ್ಟು ಕಲ ಸಿದ್ದ ಕೊಟ್ಟ ಪೆರಿಯ ಕಲ’ ಎಂದು ಕರೆಯುವ ವಾಡಿಕೆಯಿದೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಇಲ್ಲಿ ಭಗವಾನ್ ಬಬ್ಬು ಸ್ವಾಮಿಯೊಂದಿಗೆ ಕಂಬೆರ್ಲು, ತನಿಮಾನಿಗ, ಧೂಮಾವತಿ, ಬಂಟ ಮುಂತಾದ ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಹಿರಿಯರು ಹಾಗೂ ಊರ-ಪರವೂರಿನ ಭಕ್ತರ ಸಹಕಾರದಿಂದ ಜೀರ್ಣೋದ್ದಾರಗೊಂಡಿದ್ದ ಈ ದೈವಸ್ಥಾನವು ಪ್ರಸ್ತುತ ನವೀಕರಣದ ಅಗತ್ಯವಿದೆ ಎಂದು ತಿಳಿಸಿದರು.
ದೈವಸ್ಥಾನದ ನವೀಕರಣದೊಂದಿಗೆ ಕೋಲದ ಚಪ್ಪರ, ಕಂಬೆರ್ಲ ಗುಡಿ, ಅಜೆಕಾಯಿ ಕಲ್ಲು, ವೃಂದಾವನ ಕಟ್ಟೆ, ದೈವಸ್ಥಾನದ ಆವರಣ ಗೋಡೆ, ಬಾವಿ, ಅಡುಗೆ ಕೋಣೆ, ಶೌಚಾಲಯ ಹಾಗೂ ನೆಲದ ನವೀಕರಣ ಕಾಮಗಾರಿಗಳು ನಡೆಯಲಿವೆ.
ಒಟ್ಟು ಸುಮಾರು 1 ಕೋಟಿ 50 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಜೀರ್ಣೋದ್ದಾರ ಕಾರ್ಯಗಳು ಕೈಗೊಳ್ಳಲ್ಪಡಲಿವೆ. ನಮ್ಮ ಗ್ರಾಮದಲ್ಲಿ ಗ್ರಾಮದಲ್ಲಿ ಮಾಧ್ಯಮ ವರ್ಗದ ಜನರೇ ಹೆಚ್ಚಿದ್ದರೂ ಎಲ್ಲರೂ ಅತ್ಯಂತ ಹುಮ್ಮಸ್ಸಿನಿಂದ ಈ ಧರ್ಮ ಕಾರ್ಯಕ್ಕೆ ಸ್ಪಂದಿಸುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಸದಸ್ಯೆಯರು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಕೋಲದ ಚಪ್ಪರದ ಖರ್ಚು-ವೆಚ್ಚವನ್ನು ನಿಭಾಯಿಸುವ ಭರವಸೆ ನೀಡಿರುವುದು ಶ್ಲಾಘನೀಯ ಎಂದರು. ಪ್ರತಿಷ್ಠಿತ ಉದ್ಯಮಿಗಳಾದ ಸಾಯಿ ಪ್ಯಾಲೇಸ್ ರವಿ ಶೆಟ್ಟಿ ಹಾಗೂ ಬಂಜಾರ ಡಾ. ಪ್ರಕಾಶ್ ಶೆಟ್ಟಿ ಈ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ನುಡಿದರು.
ಹೃದಯವಂತ ಮುಂಬಯಿ ತುಳು-ಕನ್ನಡಿಗರ ಉದಾರ ದಾನದಿಂದ ತುಳುನಾಡಿನ ಅದೆಷ್ಟೋ ಗ್ರಾಮದ ದೈವಸ್ಥಾನ ದೇವಸ್ಥಾನ ವಿದ್ಯಾ ಕೇಂದ್ರಗಳ ಜೊತೆ ಮನೆಗಳು ಬೆಳಗಿದೆ. ಅದೇ ರೀತಿಯಲ್ಲಿ ಪಡುಬಿದ್ರಿ ಪದ್ರದಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ನಿರ್ಮಾಣ ಕಾರ್ಯದಲ್ಲೂ ಊರ ಹಾಗೂ ಪರವೂರಿನ ಭಕ್ತರು ಕೈಜೋಡಿಸಿ ಬಬ್ಬು ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದರು.
ಮುಂದಿನ ವರ್ಷ (2027) ಮೇ 11ರಿಂದ 14ರ ವರೆಗೆ ದೈವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬ್ರಹ್ಮ ಕಲಶ ಹಾಗೂ ಕೋಲವು ವಿಜೃಂಭಣೆಯಿಂದ ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ನವೀನ್ಚಂದ್ರ ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.
ಉದ್ಯಮಿ ಜಯ ಶೆಟ್ಟಿ ಮಾತನಾಡಿ, ನಾವೆಲ್ಲರೂ ದೈವಭಕ್ತರಾಗಿದ್ದೇವೆ. ದೈವ ದೇವರನ್ನು ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿದ್ದೇವೆ. ನೀವೆಲ್ಲರೂ ಸೇರಿ ಪಡುಬಿದ್ರಿ ಗ್ರಾಮದ ಪದ್ರದಬೆಟ್ಟು ಬಬ್ಬು ಸ್ವಾಮಿ ದೈವದ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲಾ ದೈವಭಕ್ತರನ್ನು ಒಂದೆಡೆ ಸೇರಿಸಿ, ಉತ್ತಮ ವ್ಯವಸ್ಥೆಯೊಂದಿಗೆ ಮುಂದಾಗಿದ್ದೀರಿ. ಈ ಧರ್ಮ ಕಾರ್ಯಕ್ಕೆ ದೈವ ಭಕ್ತರೆಲ್ಲರು ತಮ್ಮಿಂದಾದಷ್ಟು ಸಹಕಾರವನ್ನು ನೀಡಬೇಕು. ಸುಂದರವಾದ ದೈವಸ್ಥಾನದ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು. ನಾನು ಕೂಡ ನನ್ನಿಂದಾದಷ್ಟು ದೇಣಿಗೆಯನ್ನು ನೀಡುತ್ತೇನೆ ಎಂದು ಹೇಳಿದರು.
ಬೋಂಬೆ ಬಂಟ್ಸ್ ಎಸೋಸಿಯೇಶನ್ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ನಂದಳಿಕೆ ಮಾತನಾಡಿ, ಕೊರ್ದಬ್ಬು ದೈವದ ಮೇಲೆ ನಮಗೆ ಅಪಾರ ಪ್ರೀತಿ ಮತ್ತು ಭಕ್ತಿಯಿದೆ. ದೈವಸ್ಥಾನದಲ್ಲಿ ಜರಗುವ ಕೋಲದ ಸಂದರ್ಭದಲ್ಲಿಯೂ ನಾವು ಪರಿವಾರ ಸಮೇತ ತಪ್ಪದೇ ಭಾಗವಹಿಸುತ್ತೇವೆ ಎಂದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯ ಶೆಟ್ಟಿ ಪದ್ರ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಸಭೆಗೆ ವಿವರಿಸಿದರು. ಕೋಶಾಧಿಕಾರಿ ರವಿ ಶೆಟ್ಟಿ ಈವರೆಗೆ ಜಮೆಯಾದ ಹಣದ ಹಾಗೂ ಖರ್ಚಿನ ಬಗ್ಗೆ ತಿಳಿಸಿದರು. ಮುಂಬಯಿ ಸಮಿತಿಯ ಅಧ್ಯಕ್ಷ ನಾರಾಯಣ ಸಿ. ಶೆಟ್ಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮುಂಬಯಿ ಸಮಿತಿ ಗೌರವ ಅಧ್ಯಕ್ಷ ಪ್ರೊ. ರತ್ನಾಕರ ಶೆಟ್ಟಿ. ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಪ್ರಭಾಕರ ಶೆಟ್ಟಿ ಬಗ್ಗಪ್ಪ ಶೆಟ್ಟಿ ಮನೆ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸುಂದರ ಶೆಟ್ಟಿ ಬಗ್ಗಪ್ಪ ಶೆಟ್ಟಿ ಮನೆ, ಮುಂಬಯಿ ಸಮಿತಿಯ ಕೋಶಾಧಿಕಾರಿ ಉದಯ ಕೆ. ಶೆಟ್ಟಿ ಪದ್ರ, ಮುಂಬಯಿ ಹೋಟೆಲ್ ಉದ್ಯಮಿ ಅಂಗಡಿಗುತ್ತು ಪ್ರಸಾದ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕೋಶಾಧಿಕಾರಿ ರವಿ ಶೆಟ್ಟಿ, ಉಪಾಧ್ಯಕ್ಷ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜಯ ಎಸ್. ಶೆಟ್ಟಿ ಪದ್ರ ನಿರ್ವಹಿಸಿ ವಂದಿಸಿದರು. ಈ ಸಂದರ್ಭ ಸಭೆಯು ಯಶಸ್ವಿಯಾಗಿ ಜರಗಲು ವಿಶೇಷ ಸಹಕಾರವನ್ನು ನೀಡಿದ ಹೋಟೆಲ್ ಪೆನಿನ್ಸುಲಾ ಸತೀಶ್ ಶೆಟ್ಟಿಯವರನ್ನು ಅಲ್ಲದೆ ದಾನಿಗಳನ್ನು ಗೌರವಿಸಲಾಯಿತು. ಮಿಥುನ್ ಶೆಟ್ಟಿ ಪಡುಬಿದ್ರಿ ಹಾಗೂ ಅಪಾರ ಮಂದಿ ದೈವಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ದೇಣಿಗೆ ನೀಡುವ ಭಕ್ತರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಡುಬಿದ್ರಿ ಶಾಖೆ, ಅಕೌಂಟ್ ನಂಬರ್ : 89166718873, ಐಎಫ್ಎಸ್ಸಿ ಕೋಡ್ : ಪಿಕೆಜಿಪಿ0013422 ಕಳುಹಿಸಬಹುದು.) 98452 29960, 99640 27422, 98450 27356, 98204 18303, 99874 88747, 96633 56844 ಸಂಪರ್ಕಿಸಬಹುದು.

