ನ. 21, 22 : ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ, 375ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ
ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ನೃತ್ಯ ವೈಭವ
(Udupi) ಉಡುಪಿ: ನೃತ್ಯ, ಸಂಗೀತ, ಯಕ್ಷಗಾನ, ಜಾನಪದ ಕಲೆ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನ. 21 ಮತ್ತು 22ರಂದು ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ’ಆಯೋಜಿಸಲಾಗಿದೆ ಎಂದು ನೃತ್ಯನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕ ಕೆ. ಸುಧೀರ್ ರಾವ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 21ರಂದು ನಟರಾಜನ ಮೂರ್ತಿಯ ರಥೋತ್ಸವದೊಂದಿಗೆ ನೃತ್ಯಜಾತ್ರೆಗೆ ಚಾಲನೆ ದೊರೆಯಲಿದೆ. ಕಲಶ ಹಿಡಿದ ನೃತ್ಯಾಂಗನೆಯರು, ತಟ್ಟಿರಾಯ, ಗೊಂಬೆ ಮುಖವಾಡಗಳು, ವಾದ್ಯ, ಚೆಂಡೆ ವಾದನ, ಬಿರುದು ಬಾವಲಿಗಳು ಹಾಗೂ ಹುಲಿವೇಷ ಕುಣಿತದೊಂದಿಗೆ ಕಲಾವಿದರು ಮತ್ತು ಅತಿಥಿಗಳನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ಸಾಂಪ್ರದಾಯಿಕ ವೈಭವದೊಂದಿಗೆ ಕಲಾ ಉತ್ಸವಕ್ಕೆ ವಿಶಿಷ್ಟ ಮೆರುಗು ನೀಡಲಾಗುವುದು ಎಂದರು.
ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ಈ ಕಲಾ ಉತ್ಸವವು ಎರಡೂ ದಿನ ಮಧ್ಯಾಹ್ನ 3.30ರಿಂದ ರಾತ್ರಿ 9.30ರವರೆಗೆ ನಡೆಯಲಿದೆ. 375ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದ ಜತೆಗೆ ಸಂಗೀತ ಕಾರ್ಯಕ್ರಮಗಳು, ಕಲಾ ಪ್ರಾತ್ಯಕ್ಷಿಕೆಗಳು, ವಿವಿಧ ಮಳಿಗೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ ಎಂದು ನೃತ್ಯ ವೇದಿಕೆಯ ಎರಡೂ ಬದಿಗಳಲ್ಲಿ ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ನಿರಂತರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಸುರಭಿ ಸುಧೀರ್ ಅವರಿಂದ ವಾದ್ಯಸಂಗೀತ, ವಿದುಷಿ ಪ್ರೀತಿಕಲಾ ದೀಪಕ್ ಪುತ್ತೂರು ಅವರಿಂದ ನೃತ್ಯಸಂಗೀತ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರಿಂದ ಭಕ್ತಿ ಸಂಗೀತ, ಗಣೇಶ್ ಹೆಬ್ರಿ ಅವರಿಂದ ಯಕ್ಷಸಂಗೀತ, ಮೈಸೂರಿನ ನಾವು ಬ್ಯಾಂಡ್ ತಂಡದಿಂದ ರಂಗಸಂಗೀತ, ಕಲಾವತಿ ದಯಾನಂದ್ ಅವರಿಂದ ಜಾನಪದ ಸಂಗೀತ ಹಾಗೂ ಅನುಷ್ ಶೆಟ್ಟಿ ಮೈಸೂರು ಬಳಗದಿಂದ ‘ರಿದಂ ಅಡ್ಡ’ಸಮಕಾಲೀನ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.
ಜಾತ್ರೆಯ ಆವರಣದಲ್ಲಿ ನೃತ್ಯದ ಆಭರಣಗಳು, ವಸ್ತ್ರಗಳು, ಗೆಜ್ಜೆ, ಗೆಜ್ಜೆ ಚೀಲ, ಖಾದಿ ಬಟ್ಟೆಗಳು, ಪುಸ್ತಕಗಳು ಹಾಗೂ ಗೃಹ ಉತ್ಪನ್ನಗಳ ಮಳಿಗೆಗಳಿರಲಿವೆ. ಬಟ್ಟೆ ತಯಾರಿಕೆ, ಮಣ್ಣಿನ ಉತ್ಪನ್ನಗಳು, ಕಾವಿ ಕಲೆ ಮತ್ತು ಚುಕ್ಕಿ ಕಲೆಯ ಪ್ರಾತ್ಯಕ್ಷಿಕೆಗಳ ಜತೆಗೆ ಕಲಾ ಪ್ರದರ್ಶನ, ಸೆಲ್ಫಿ ಕಾರ್ನರ್ ಹಾಗೂ ವಿವಿಧ ತಿಂಡಿ-ತಿನಿಸುಗಳ ಮಳಿಗೆಗಳೂ ಇರಲಿವೆ.
ನ. 19ರಂದು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ:
ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನ. 19ರಂದು ಸಂಜೆ 6 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್ನಲ್ಲಿ ‘ವಿಶ್ವ ನೃತ್ಯಪ್ರಭಾ-2026’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಮಾನಸಿ ಸುಧೀರ್, ವಾದಿರಾಜ್ ಭಟ್ ಹಾಗೂ ಉಮೇಶ್ ಭಟ್ ಉಪಸ್ಥಿತರಿದ್ದರು.

