ಅವರಾಲು “ತುದೇ ಬರಿ ಫ್ರೆಂಡ್ಸ್” : ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಯ ನೆರವಿಗಾಗಿ ಹುಲಿವೇಷ
ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಸೇವೆ
(Padubidri) ಪಡುಬಿದ್ರಿ : “ತುದೇ ಬರಿ ಫ್ರೆಂಡ್ಸ್” ಅವರಾಲು ಮಟ್ಟುಇವರ ಆಶ್ರಯದಲ್ಲಿ ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಯ ನೆರವಿಗಾಗಿ ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಹುಲಿವೇಷ ತಂಡದ ಊದು ಪೂಜೆಯು ಶನಿವಾರ ರಾತ್ರಿ ಅವರಾಲು ಮಟ್ಟು ಧೂಮಾವತಿ ದೈವಸ್ಥಾನದ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಅವರಾಲು ಕಂಕಣಗುತ್ತು ರಘುರಾಮ್ ಶೆಟ್ಟಿ ಉದ್ಘಾಟಿಸಿ, ತುದೇ ಬರಿ ಫ್ರೆಂಡ್ಸ್ ಯುವಕರ ಸಾಮಾಜಿಕ ಕಾರ್ಯ ನಿರಂತರ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಪತ್ರಕರ್ತ, ಶಿಕ್ಷಕ ದೀಪಕ್ ಕೆ. ಬೀರ ಮಾತನಾಡಿ, ಜಾನಪದ ಕಲೆಯಾದ ಹುಲಿವೇಷವನ್ನು ಮನೋರಂಜನೆಯ ಜೊತೆಗೆ ಸಮಾಜಮುಖಿ ಚಿಂತನೆಯೊಂದಿಗೆ ನೋಡುವ ಯುವಕರ ಕಾರ್ಯ ಅಭಿನಂದನೀಯ ಎಂದರು.
ಸನ್ಮಾನ : ಸುಮಾರು 25 ವರ್ಷಗಳಿಂದ ಹುಲಿ ವೇಷಧಾರಿಯಾಗಿ ಜೊತೆಗೆ ಹುಲಿವೇಷದ ತಂಡವನ್ನು ಮುನ್ನಡೆಸುತ್ತಿರುವ ಅಶೋಕ್ ಪೂಜಾರಿ ಪಲಿಮಾರು ಮತ್ತು ಹುಲಿವೇಷ ತಂಡ ಮುನ್ನಡೆಸಿದ್ದ ಹಾಗೂ 10 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿರುವ ವಿಶ್ವ ಕಲ್ಲಟ್ಟೆ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸುರೇಶ್ ಪೂಜಾರಿ ಕೆಳಗಿನ ಮನೆ, ದಯಾನಂದ ಪೂಜಾರಿ ಪಡ್ಡಾಯಿ ಕುದ್ರು, ಯುವರಾಜ್ ಕುಲಾಲ್ ಪಡುಬಿದ್ರಿ, ಸಂದೇಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್ ಭಂಡಾರಿ ಪಲಿಮಾರು, ಯೋಗೀಶ್ ಅವರಾಲು, ತುದೇ ಬರಿ ಫ್ರೆಂಡ್ಸ್ ಅವರಾಲು ಮಟ್ಟು ಸದಸ್ಯರು ಉಪಸ್ಥಿತರಿದ್ದರು.
ಪ್ರತಾಪ್ ಅವರಾಲು ಮಟ್ಟು ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಊದು ಪೂಜೆ ಜರಗಿತು.

