ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ
ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆ ಬಿಜೆಪಿಯಲ್ಲಿದೆ : ಸಂಸದ ಚೌಟ
(PHOTO CREDIT : HARINAXA, MUDARANGADI)
(Uchila) ಉಚ್ಚಿಲ : ಪಡುಬಿದ್ರಿ : ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆಯು ಬಿಜೆಪಿಯಲ್ಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಸಂಜೆ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಮಟ್ಟದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರು 4,399 ದಿನದ ಕೆಲಸ ಮಾಡಿ ದೇಶದ ಪ್ರಜಾಪ್ರಭುತ್ವದಲ್ಲಿ ಸುದೀರ್ಘ ಪ್ರಧಾನಿಯಾಗಿದ್ದಾರೆ. ನವ ಮನೋಭೂಮಿಕೆ, ನವ ದೃಷ್ಟಿತ್ವದ ನೆಲೆಯಲ್ಲಿ ಕಾರ್ಯಕರ್ತರು ಸಮಾಜದ ಆಸೆ ಆಕಾಂಕ್ಷೆಗಳಿಗಾಗಿ ಕೆಲಸ ನಿರ್ವಹಿಸಬೇಕು. ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನದಲ್ಲಿರಿಸಿ ಮುಂದಿನ ಚುನಾವಣೆ ಎದುರಿಸಬೇಕಿದೆ.
ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ ನ ಅಧಿಕಾರದ ದರ್ಪದಿಂದ ಜನ ಬೇಸತ್ತು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ತಮಿಳುನಾಡಿನಲ್ಲಿ ಹೊಸ ಪಕ್ಷದ ಒಲವು ನಮಗೆ ಎಚ್ಚರಿಕೆಯನ್ನೂ ನೀಡಿದೆ.
ಕೇಂದ್ರದಿಂದ 4 ಲಕ್ಷ ಕೋಟಿ ತೆರಿಗೆಯ ಆದಾಯವನ್ನು ಕರ್ನಾಟಕ ಗಳಿಸುತ್ತಿದೆ. ಆದರೂ ಕಾಂಗ್ರೆಸ್ ಸರಕಾರವು ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳನ್ನು ಬಿಂಬಿಸುತ್ತಿದೆ. ಮುಂದಿನ ಎರಡು ವರ್ಷ ಸವಾಲಿನದ್ದಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕಾಂಗ್ರೆಸ್ ಸರಕಾರ ತಡೆಯೊಡ್ಡುತ್ತಿದೆ. ಬಿಜೆಪಿಯು ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಿದೆ. ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ವಿಭಾಗ ಪ್ರಭಾರಿ ಭಾರತೀಶ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಸಂಚಾಲಕ ಕೆ.ವಿ. ಶೆಟ್ಟಿ, ನವೀನ್ ನಾಯಕ್, ಜಿತೇಂದ್ರ ಶೆಟ್ಟಿ, ದಿನೇಶ್ ಅಮೀನ್, ರಾಜೀವ್ ಕುಮಾರ್, ಸುರೇಶ್ ಶೆಟ್ಟಿ ಗೋಪಾಡಿ, ಅನಿತಾ ಮರವಂತೆ, ದಿನಕರ ಶೆಟ್ಟಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರುರಾಜ ಗಂಟಿಹೊಳಿ, ಕಿರಣ್ ಕುಮಾರ್ ಕೊಡ್ಗಿ, ರೇಶ್ಮಾ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಪ್ರಶಿಕ್ಷಣ ಅಭಿಯಾನದಲ್ಲಿ 142 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಶ್ರೀಕಾಂತ ನಾಯಕ್ ಕಾರ್ಯಕ್ರಮ ನಿರೂಪಿಸಿ, ಕೆ.ವಿ. ಶೆಟ್ಟಿ ವಂದಿಸಿದರು.

