


ಉಚ್ಚಿಲ ಪೊಲ್ಯ ರಸ್ತೆಯ ಅವ್ಯವಸ್ಥೆ : ಬಡಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯ, ಸ್ಥಳೀಯರ ಆರೋಪ
(Uchila)ಉಚ್ಚಿಲ : ಉಚ್ಚಿಲ – ಪೊಲ್ಯ ರಸ್ತೆಯು ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ಇದಕ್ಕೆ ಬಡಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ನಾಲ್ವರು ಸದಸ್ಯರ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೊಲ್ಯ ರಸ್ತೆಯು ಪ್ರಾರಂಭದಿಂದ ಅಂತ್ಯದವರೆಗೆ ಗುಂಡಿಯಿಂದ ಕೂಡಿದೆ. ಇಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕ ಬೇಕಾದ ಪ್ರಮೇಯ ಒದಗಿದೆ.
ಬಡಾ ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿಗೆ ಮಜೀದ್, ರಜಾಕ್, ಲೀಲಾ ಮತ್ತು ಸೌಲತ್ ಎಂಬ ನಾಲ್ವರು ಸದಸ್ಯರು ಆಯ್ಕೆ ಆಗಿದ್ದು, ಅವರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದುದು ವಿಪರ್ಯಾಸ. ಅವರು ಕೇವಲ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆಯೇ ಹೊರತು ಅವರು ಯಾರೆಂದೇ ಜನರಿಗೆ ಪರಿಚಯ ಇಲ್ಲ. ಪಂಚಾಯತ್ ಸದಸ್ಯರಾಗಿ ಇನ್ನೇನು ಒಂದೆರಡು ತಿಂಗಳಲ್ಲಿ ಅವಧಿ ಮುಗಿಯುತ್ತಾ ಬಂದರೂ, ಅವರು ಯಾವುದೇ ಕೆಲಸವನ್ನು ಮಾಡಿಲ್ಲ ಎಂದೂ ಗ್ರಾಮಸ್ಥರು ದೂರುತ್ತಿದ್ದಾರೆ.
ಎಲ್ಲಿಯೂ ಚರಂಡಿ ಹೂಳೆತ್ತಿಲ್ಲ
ಈ ನಾಲ್ವರ ಮುತುವರ್ಜಿಯಲ್ಲಿ ಎಲ್ಲಿಯೂ ಚರಂಡಿ ಹೂಳೆತ್ತಿಲ್ಲ. ಪೊಲ್ಯ ಪರಿಸರದ ಯಾವುದೇ ಚರಂಡಿ ಪಕ್ಕದ ಜಂಗಲ್ ಕಟ್ಟಿಂಗ್ ಮಾಡಿಲ್ಲ. ಚರಂಡಿಯಲ್ಲಿ ಹೂಳು ತುಂಬಿ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲಿ ಹರಿಯುತ್ತಿರುವ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಇನ್ನಾದರೂ ಗ್ರಾಮ ಪಂಚಾಯತ್ ಸದಸ್ಯರು ನಿದ್ರೆಯಿಂದ ಎದ್ದು, ಗ್ರಾಮ ಪಂಚಾಯತಿಗೆ ಒತ್ತಡ ಹೇರಿ, ಇತ್ತ ಕಣ್ಣು ಹಾಯಿಸಲಿ ಎನ್ನುತ್ತಾರೆ ಪೊಲ್ಯ ನಿವಾಸಿಗಳು.

