‘ಉಡುಪಿ ಉಚ್ಚಿಲ ದಸರಾ‘ಕ್ಕೆ ಮೆರುಗು ತಂದ ಕೊಡಿಯಾಲ್ ತಂಡದ ‘ಛತ್ರಪತಿ ಶಿವಾಜಿ‘ ನಾಟಕ
ಶಿವಾಜಿ ಮಹಾರಾಜರ ಇಡೀ ಜೀವನವನ್ನು ಕಟ್ಟಿಕೊಟ್ಟ ಈ ನಾಟಕಕ್ಕೆ ಪ್ರೇಕ್ಷಕರ ಮನ ಗೆದ್ದ ನಾಟಕ
(Uchila) ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ – ಉಚ್ಚಿಲ ದಸರಾ’ ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಐತಿಹಾಸಿಕ ನಾಟಕ ‘ಛತ್ರಪತಿ ಶಿವಾಜಿ’ ಪ್ರೇಕ್ಷಕರ ಮನಗೆದ್ದಿದೆ.
ಶಿವಾಜಿ ಮಹಾರಾಜರ ಕುರಿತ ಈ ನಾಟಕ ತುಳು ರಂಗ ಭೂಮಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ನಿರ್ದೇಶನಕ್ಕೆ ಜನ ಭೇಷ್ ಎಂದಿದ್ದಾರೆ.
ಶಿವಾಜಿ ಮಹಾರಾಜರ ಇಡೀ ಜೀವನವನ್ನು ಕಟ್ಟಿಕೊಟ್ಟ ಈ ನಾಟಕದಲ್ಲಿ ಶಿವಾಜಿ ಪಟ್ಟಾಭಿಷೇಕ ನಡೆಯುವ ಸಂದರ್ಭವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಲಾಗಿದೆ. ಕೆಲವೊಂದು ದೃಶ್ಯಗಳು ನೋಡುಗರ ಮೈರೋಮಾಂಚನ ಗೊಳಿಸುತ್ತೆ.
ಪ್ರತಿಯೊಂದು ದೃಶ್ಯಗಳು, ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಲಾವಿದರ ಅದ್ಭುತ ನಟನೆ, ವಿನ್ಯಾಸ, ಬೆಳಕು, ಹಿನ್ನೆಲೆ ಸಂಗೀತ ಎಲ್ಲವೂ ನಾಟಕಕ್ಕೆ ಮತ್ತಷ್ಟು ಮೆರಗು ತಂದಿದೆ.
‘ಛತ್ರಪತಿ ಶಿವಾಜಿ’ ನಾಟಕ ಆರಂಭದಿಂದ ಕೊನೆಯ ವರಗೆ ಪ್ರೇಕ್ಷಕರನ್ನು ಅತ್ತಿತ್ತ ಕದಡದಂತೆ ಮಾಡಿದ್ದು, ಜನರು ಸಂತಸದ ಜೊತೆ ರೋಮಾಂಚನವನ್ನು ವ್ಯಕ್ತಪಡಿಸಿದರು.
ದಸರಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದ ‘ಛತ್ರಪತಿ ಶಿವಾಜಿ’ ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ನಾಟಕದ ಕೊನೆಯಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಉಪಾಧ್ಯಕ್ಷ ದಿನೇಶ್ ಎರ್ಮಾಳ್, ಸುರೇಶ್, ಸತೀಶ್ ಮತ್ತಿತರರು ಗೌರವಿಸಿದರು.

