ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋದ ಟಯರ್ ಸ್ಫೋಟ, ಮುಗುಚಿ ಬಿದ್ದ ಟೆಂಪೋ, ಮಹಿಳೆ ಸಾವು
ದುರ್ದೈವಿ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ
(Hejamady) ಹೆಜಮಾಡಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಅದರಲ್ಲಿದ್ದ ಹಲವರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಗುರುವಾರ ಬೆಳಗ್ಗೆ ಘಟಿಸಿದೆ.
ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ ೭ಜನರು ಗಾಯಗೊಂಡಿದ್ದಾರೆ.
ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಟೆಂಪೋ ಚಾಲಕ ತನ್ನ ನಿಯಂತ್ರಣ ಕಳೆದು ಕೊಂಡ ಪರಿಣಾಮ ಮುಗುಚಿ ಬಿದ್ದಿದೆ. ಈಗಟನೆಯಿಂದ ಕ್ಷಣ ಮಾತ್ರದಲ್ಲಿ ಎದುರಿಗೆ ಸಾಗುತ್ತಿದ್ದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂದರ್ಭ ವಾಹನ ದಟ್ಟಣೆ ಹೆಚ್ಚಾಗಿ ಇರದ ಪರಿಣಾಮ ಹೆಚ್ಚಿನ ಅಪಘಾತ ತಪ್ಪಿದೆ.
ಮುಗುಚಿಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ. ಮಹಿಳೆಯೋರ್ವರು ಮಿಲ್ಲರ್ ನ ಅಡಿಗೆ ಸಿಲುಕಿ ಅವರನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಹರಸಾಹಸಪಟ್ಟರು.
ಹೆಜಮಾಡಿ ಟೋಲ್ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಆಗಮಿಸಿ ಮಹಿಳೆಯನ್ನು ರಕ್ಷಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.
ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಪುವಿನಲ್ಲಿ ನಡೆದ ಟೆಂಪೋ ದುರಂತದಲ್ಲಿ ೫ ಜನ್ರು ಧಾರುಣವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ಘಟನೆ ಮತ್ತೊಮ್ಮೆ ಆಘಾತ ತಂದಿದೆ.
ಗೂಡ್ಸ್ ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವ ಬಗ್ಗೆ ಪೋಲಿಸ್ ಇಲಾಖೆ ಗಮನಿಸಬೇಕಾಗಿದೆ.

