ಕುಡಿತದ ಮತ್ತಿನಲ್ಲಿ ಬಿಯರ್ ಬಾಟ್ಲಿಯಿಂದ ಇರಿದು ಚಿಕ್ಕಪ್ಪನ ಕೊಲೆ
ದೈವದ ತಂಬಿಲ ಸೇವೆಯ ಕಾರ್ಯಕ್ರಮದಲ್ಲಿ ನಡೆದ ಘಟನೆ
(Bantwala) ಬಂಟ್ವಾಳ: ಮದ್ಯದ ಮತ್ತಿನಲ್ಲಿ ಸಂಬಂಧಗಳನ್ನೇ ಮರೆತು ಕೊಲೆ ಮಾಡುವಂತ ಘಟನೆಗಳು ಇತ್ತೀಚಿಗಿನ ದಿನಮಾನಸದಲ್ಲಿ ಹೆಚ್ಚಾಗುತ್ತಿದ್ದು, ಬಂಟ್ವಾಳ ತಾಲೂಕಿನಲ್ಲಿ ಇಂತಹದ್ದೇ ಒಂದು ಕೃತ್ಯ ನಡೆದಿದೆ.
ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರಾತ್ರಿ ಕುಡಿತದ ಮತ್ತಿನಲ್ಲಿ ಮನೆಗೆ ಬಂದಿದ್ದ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನನ್ನೇ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಕೊಲೆಗೈದ ಘಟನೆ ಘಟಿಸಿದೆ. ವಿಚಿತ್ರವೆಂದರೆ ಅಂದು ರಾತ್ರಿ ಮನೆಯಲ್ಲಿ ದೈವಗಳ ತಂಬಿಲ ಸೇವೆಯ ಧಾರ್ಮಿಕ ಕಾರ್ಯಕ್ರಮವಿದ್ದು, ಕುಟುಂಬದ ಸದಸ್ಯರುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕೊಲೆಗೀಡಾದವರನ್ನು ಮಧುಸೂಧನ (37) ಎಂದು ಗುರುತಿಸಲಾಗಿದ್ದು, ಅವರ ಅಣ್ಣ ಕೇಶವ ಪೂಜಾರಿಯ ಮಗ ರಾಹುಲ್ (23) ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ.
ಕೇಶವ ಪೂಜಾರಿಯವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಸೇವೆಯ ಕಾರ್ಯಕ್ರಮ ಇದ್ದುದರಿಂದ ರಾಹುಲ್ ಮತ್ತಿತರರು ಮನೆಯ ಹೊರಗಡೆ ಕುಡಿದು ಗದ್ದಲ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಮಧುಸೂದನ್ ಅವರು ಆಕ್ಷೇಪಿಸಿದಲ್ಲದೆ, ಕೆಲಸದ ವಿಚಾರದಲ್ಲೂ ಇವರೊಳಗೆ ಸ್ವಲ್ಪ ಮಟ್ಟಿನ ತಗಾದೆಯ ಉಂಟಾಗಿತೆನ್ನಲಾಗಿದೆ.
ಇದರಿಂದ ಕುಪಿತನಾದ ರಾಹುಲ್ ಬಿಯರ್ ಬಾಟಲ್ ನಿಂದ ಚಿಕ್ಕಪ್ಪ ಮಧುಸೂದನ್ ಅವರ ಕುತ್ತಿಗೆಯ ಭಾಗಕ್ಕೆ ಇರಿದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಂಭೀರ ಸ್ವರೂಪದ ಗಾಯಗೊಂಡ ಮಧುಸೂದನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ.
ಮೃತ ಮಧೂಸೂದನ್ ಅವಿವಾಹಿತರಾಗಿದ್ದು, ವೃತ್ತಿಯಲ್ಲಿ ಎಲೆಕ್ನಿಷಿಯನ್ ಆಗಿದ್ದರು. ಆರೋಪಿ ರಾಹುಲ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಪುಂಜಾಲಕಟ್ಟೆ ಪೊಲೀಸರು ಆರೋಪಿ ರಾಹುಲ್ ನನ್ನು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

