ಕೂಡ್ಲಿಗಿ: ಮಣ್ಣೆತ್ತಿನ ಅಮವಾಸ್ಯೆ, ಮಣ್ಣಿನ ಜೊಡೆತ್ತುಗಳ ಆರಾಧನೆ
ವಿಶೇಷ ವರದಿ: ವೃಷಭೇಂದ್ರ ಕೂಡ್ಲಿಗಿ
(Koodligi) ಕೂಡ್ಲಿಗಿ: ನಮ್ಮ ನಾಡಿನಲ್ಲಿ ಪ್ರಕೃತಿಯಲ್ಲಿನ ಮರ ಗಿಡಗಳನ್ನು ಹಾಗೂ ಹಲವು ಜೀವಿಗಳನ್ನು , ದೈವಿ ಸ್ವರೂಪದಲ್ಲಿ ಕಾಣಲಾಗುತ್ತೆ ಮತ್ತು ಅವುಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ.
ಎತ್ತುಗಳನ್ನು ಮುಂಗಾರು ಉತ್ಸವ ಕಾರು ಹುಣ್ಣಿಯಂದು, ನಂತರ ಮಣ್ಣೆತ್ತಿನ ಅಮವಾಸ್ಯೆ ದಿನದಂದು ಬಸವಣ್ಣನೆಂದೇ ಪೂಜಿಸಿ ಆರಾಧಿಸಲಾಗುತ್ತದೆ.
ಅಷ್ಟು ಮಾತ್ರವಲ್ಲ ನಮ್ಮ ಪೂರ್ವಜರು ರೈತಾಪಿ ಜನರು ಬೂಮಿಯಲ್ಲಿನ ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರಾಗಿದ್ದಾರೆ. ನಾಗರ ಪಂಚಮಿಯಲ್ಲಿ ನಾಗರ ಹಾವಿನ ಮೂರ್ತಿ, ಗಣೇಶ ಹಬ್ಬದಲ್ಲಿ ಆನೆಯ ಸೊಂಡಿಲ ಗಣೇಶ, ಇಲಿಯಾಗಿರುವ ಮೂಷಿಕರಾಜನ ಮಣ್ಣಿನ ಮೂರ್ತಿ, ದಸರಾ ಹಬ್ಬದಲ್ಲಿ ಕಾಳಿಕಾಂಬೆಯ ಮಣ್ಣಿನ ಮೂರ್ತಿ, ಶಿವರಾತ್ರಿ ಹಬ್ಬದಂದು ಶಿವನ ಮಣ್ಣಿನ ಮೂರ್ತಿ, ಕಾಮನ ಹಬ್ಬದಲ್ಲಿ ಮಣ್ಣಿನ ಕಾಮನ ಮೂರ್ತಿ ಹೀಗೇ ಮಣ್ಣು- ಮಣ್ಣಿನ ಮೂರ್ತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇದು ಮಣ್ಣಿಗೂ ಆರಾಧನೆಗೂ ಆಧ್ಯಾತ್ಮಿಕತೆಗೂ ಇರುವ ನಂಟನ್ನು ಸೂಚಿಸುತ್ತದೆ. ಸಂಪ್ರದಾಯಿಕ ಆಚರಣೆಗಳು ನಗರ ಪಟ್ಟಣಗಳಲ್ಲಿ ಆಧುನಿಕ ಭರಾಟೆಯಲ್ಲಿ ಅತಿ ವಿರಳವಾಗಿದ್ದು, ನಮ್ಮ ದೇಶದ ನರ ನಾಡಿಗಳಂತಿರುವ ಗ್ರಾಮೀಣ ಭಾಗದಲ್ಲಿ ಈಗಲೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
ಮಣ್ಣೆತ್ತಿನ ಅಮವಾಸ್ಯೆ 2025ರ ಜೂ 25ರಂದು ಇದ್ದು, ರೈತರು ವಿಶೇಷ ಹಬ್ಬವನ್ನು ಬಹು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಜೋಡೆತ್ತುಗಳ ಜೋಡಿ ಬಲು ಜೋರು. ಪಟ್ಟಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ , ಕುಂಬಾರರು, ಚಿತ್ರಗಾರರು ತಯಾರಿಸಿದ ಮಣ್ಣಿನ ಎತ್ತುಗಳಿಗೆ ತುಂಬಾ ಬೇಡಿಕೆ. ನಗರ ಪ್ರದೇಶಗಳ ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು, ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಬಲು ಚಂದ. ಮಣ್ಣಿನ ಎತ್ತುಗಳನ್ನು ದೇವರ ಜಗುಲಿಯ ಮೇಲಿಟ್ಟು, ಪೂಜೆಗೈಯ್ಯಲಾಗುತ್ತೆ. ಆರಾಧಿಸಲಾಗುತ್ತದೆ.
ಹೆಂಗಸರು ಹೋಳಿಗೆ, ಕಡಬು ಸೇರಿದಂತೆ ಸಿಹಿ ಖಾದ್ಯಗಳನ್ನು ತಯಾರಿಸಿ ಜೋಡೆತ್ತುಗಳಿಗೆ ನೈವೇದ್ಯ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಮನೆಯಲ್ಲಿನ ಎತ್ತುಗಳ ದನ-ಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಬೆಳಗಿ ಎಡೆ ಹಿಡಿದು ಪೂಜಿಸುತ್ತಾರೆ.
ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ, ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ.
ದೇವಸ್ಥಾನಗಳಿಗೆ ಕಾಯಿ, ಕರ್ಪೂರದೊಂದಿಗೆ ತೆರಳಿ, ಎಡೆ ಹಿಡಿದು ಬಂದು ಮನೆ ಮಂದಿಯಲ್ಲಾ ಒಟ್ಟಾಗಿ ಕುಳಿತು ಹಬ್ಬದೂಟ ಮಾಡುತ್ತಾರೆ. ಸಂಜೆ ಹೆಣ್ಣು ಮಕ್ಕಳು ಮನೆಮನೆಗೆ ತೆರಳಿ, ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.
ಈ ಹಬ್ಬ ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ‘ಮಣ್ಣೆತ್ತುಗಳು ಜೋಡಿಗೆ 30 -50 ರೂ. ಗೆ ಮಾರಲಾಗುತ್ತದೆ. ಈ ಬಾರಿ ಅಷ್ಟು ಬೇಡಿಕೆ ಇಲ್ಲ’ ಎನ್ನುತ್ತಾರೆ ಮಣ್ಣೆತ್ತುಗಳ ತಯಾರಕರು.
ಅಖಂಡ ಬಳ್ಳಾರಿ ಜಿಲ್ಲೆಯ ಹಲವೆಡೆ ಮಣ್ಣಿನಿಂದ ತಯಾರಿಸಿದ, ನೀರಿನಲ್ಲಿ ಕರಗುವ,ಯಾವುದೇ ಬಣ್ಣ ಹಚ್ಚದೇ ಇರೊ ಮಣ್ಣಿನ ಬಸವಣ್ಣಗಳ ಮಾರಾಟ ಮಾಡಲಾಗುತ್ತದೆ.

