ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ
(Pdubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಸಂದರ್ಭ ಸ್ಥಾಪಿತವಾಗಲಿರುವ ನೂತನ ಧ್ವಜಸ್ಥಂಭಕ್ಕಾಗಿ ದಾನಿ, ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅವರ ಸಹಕಾರದಿಂದ ಹೆಬ್ರಿ ಪರಿಸರದಲ್ಲಿ ಆರಿಸಲಾಗಿರುವ ಸುಮಾರು ೬೫ಅಡಿ ಬೋಗಿಯ ಮರವನ್ನು ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ತರಲಾಯಿತು.
ಸಂಜೆಯ ವೇಳೆಗೆ ಪಡುಬಿದ್ರಿ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದ್ವಾರದ ಬಳಿ ಆಗಮಿಸಿದ ಈ ಧ್ವಜಮರವನ್ನು ಶ್ರೀ ಕ್ಷೇತ್ರದ ವತಿಯಿಂದ ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಅರ್ಚಕ ವೈ. ಗುರುರಾಜ ಭಟ್ ಜೀರ್ಣೋದ್ಧಾರ ಸಮಿತಿಯ ಉಪಾಧಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಮತ್ತಿತರರು ಸ್ವಾಗತಿಸಿದರು.
ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇಗುಲ ಹಾಗೂ ಶ್ರೀ ಕ್ಷೇತ್ರ ಪಡುಬಿದ್ರಿಯ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಭಾರೀ ಮಳೆಯನ್ನೂ ಲೆಕ್ಕಿಸದೆ ಪಂಚವಾದ್ಯ, ಬ್ಯಾಂಡ್‌ಸೆಟ್, ಶ್ರೀ ಪಲಿಮಾರು ಮಠದ ವಿದ್ಯಾರ್ಥಿಗಳಿಂದ ವೇದಘೋಷ ಸಹಿತ ನಾಸಿಕ್ ಬ್ಯಾಂಡ್‌ನೊಂದಿಗೆ ವಿವಿಧ ಭಜನಾ ತಂಡಗಳ ಸಹಿತ ಸಾಗಿಬಂದ ಗ್ರಾಮದ ಭಕ್ತ ಜನತೆಯ ವೈಭವದ ಮೆರವಣಿಗೆಯಲ್ಲಿ ಈ ನೂತನ ಧ್ವಜಮರವನ್ನು ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು.
ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರು ಸಲ್ಲಿಸಿದ ವಿಶೇಷ ಪೂಜೆಯ ಬಳಿಕ ಈ ಮರವನ್ನು ಡಿಕ್ಸ್ ಶಿಪ್ಪಿಂಗ್‌ನ ದೇವಾನಂದ ಶೆಟ್ಟಿ ಅವರ ವಿಶೇಷ ಕ್ಯಾರಿಯರ್ ವಾಹನದಿಂದ ಕೆಳಕ್ಕಿಳಿಸಲಾಯಿತು.
ರಾಜ್ಯ ಕೆಎಂಎಫ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಜೀರ್ಣೋದ್ಧಾರ ಸಮಿತಿಯ ವೈ. ಸುಕುಮಾರ್, ಸುಚರಿತಾ ಅಂಚನ್, ನವೀನ್‌ಚಂದ್ರ ಜೆ. ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ವಿಷ್ಣುಮೂರ್ತಿ ಆಚಾರ್ಯ, ಸ್ಥಳೀಯ ನಾಯಕ ವಸಂತ ಪೂಜಾರಿ, ಸುಜಿತ್ ಶೆಟ್ಟಿ, ರಮಾಕಾಂತ ರಾವ್, ಶ್ರೀ ದೇವಸ್ಥಾನದ ಸಿಬಂದಿ ವರ್ಗ ಮತ್ತಿತರರಿದ್ದರು.

