ಮೂಲ್ಕಿ ಲಯನ್ಸ್ ಕ್ಲಬ್ಗೆ ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ ರವರ ಅಧಿಕೃತ ಭೇಟಿ
(Moolki) ಮೂಲ್ಕಿ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವಿಶ್ವದಾದ್ಯಂತ 210 ದೇಶಗಳಲ್ಲಿ ತನ್ನ ಸೇವಾ ಜಾಲವನ್ನು ಹೊಂದಿದ್ದು, ಪ್ರಸ್ತುತ ವಿಶ್ವದಾದ್ಯಂತ ಸುಮಾರು 14 ಲಕ್ಷ ಸದಸ್ಯರ ಮೂಲಕ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಪಂದಿಸಿ ಸೇವೆ ಮಾಡುತ್ತಿದೆ. ಸಮಾಜದ ಸೇವೆ ಮತ್ತು ಮಾನವೀಯ ನೆಲೆಯ ಸಹಾಯ ಹಸ್ತ ನೀಡುವ ವಿಶ್ವದ ನಾಯಕನಾಗಿ ಉದ್ದೇಶ ಹೊಂದಿರುವ ಸಂಸ್ಥೆ ಲಯನ್ಸ್. 1917ರಲ್ಲಿ ಲಯನ್ಸ್ ಸಂಸ್ಥೆಆರಂಭಿಸಿ, ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ ಎಂದು ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ. ಹೇಳಿದರ.
ಅವರು ಮುಲ್ಕಿ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಮಂಗಳೂರಿನ ಪಿಲಿಕುಳದಲ್ಲಿ ಬೆಲೆಬಾಳುವ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಗಿದೆ. ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ಎಮರ್ಜೆನ್ಸಿ ಕಿಟ್ ಅಸಹಾಯಕರಿಗೆ, ಅಪಘಾತಕ್ಕೀಡಾದವರಿಗೆ ನೀಡಲಾಗಿದೆ. ಮುಂದೆ ಸುಮಾರು 50 ಜನರಿಗೆ ಕೃತಕ ಅವಯವ ಜೋಡಣೆ ಮಾಡುವ ಕಾರ್ಯಕ್ರಮವಿದೆ ಎಂದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ಟ ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಮೂಲ್ಕಿ ಲಯನ್ಸ್ ಕ್ಲಬ್ ವತಿಯಿಂದ ಅನೇಕ ಸೇವಾ ಕಾರ್ಯಕ್ರಮಗಳು ನಡೆದಿದ್ದು, ಕಕ್ವದಲ್ಲಿ ಹಾಗೂ ಹೆಜಮಾಡಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಕಣ್ಣು ತಪಾಸಣಾ ಶಿಬಿರ, ಪರಿಸರದ 150 ಜನ ಸಾರ್ವಜನಿಕರಿಗೆ ಉಚಿತ ಕನ್ನಡಕ ವಿತರಣೆ, ಮಾದಕ ದೃವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆ ಜನಜಾಗೃತಿ, ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರು ವಂಚನೆಗೊಳಪಡುವ ಕುರಿತು ಮಾಹಿತಿ ಕಾರ್ಯಾಗಾರ, ಹೆಜಮಾಡಿ ಐಸ್ಪ್ಲಾಂಟ್ಬಳಿ ಅಪಾಯಕಾರಿ ತಿರುವುಗಳಲ್ಲಿ ಬ್ಲಿಂಕ್ ಲೈಟ್ ಅಳವಡಿಸಲಾಗಿದೆ. ಮುಲ್ಕಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಆಟಿ ಕಷಾಯ (ಆಷಾಢ) ವಿತರಣೆ, ಕಾರ್ಗಿಲ್ ವಿಜಯೋತ್ಸವ ದಿನದಂದು ನಿವೃತ್ತ ಯೋಧರಿಗೆ ಸನ್ಮಾನ, ಸ್ವಾತಂತ್ರ್ಯ ದಿನಚರಣೆಯ ದಿನದಂದು, ಮೂಲ್ಕಿ ಪರಿಸರದ ಶಾಲಾ ಎಸ್.ಎಸ್.ಎಲ್.ಸಿ, ಹಾಗೂ ಪಿ.ಯು.ಸಿ ಯ 36 ವಿದ್ಯಾರ್ಥಿಗಳಿಗೆ ನಗದಿನೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವ, ಸಿ.ಎಸ್.ಐ. ಬಾಲಿಕಾಶ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನ ಕಾರ್ಯಕ್ರಮ, ಮಾನಸ ವಿಶೇಷ ಮಕ್ಕಳ ಶಾಲೆ ಪಡುಬೆಳ್ಳೆಗೆ ಸುಮಾರು 75 ಸಾವಿರ ಮೊತ್ತದಲ್ಲಿ ದಿನಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮ ಆಯೋಜನೆ, ಶಿಮಂತೂರು ಶಾಲೆಯ ಓರ್ವ ಶಿಕ್ಷಕರಿಗೆ ಮಾಸಿಕ ವೇತನ 12,000 ದಂತೆ 5 ತಿಂಗಳು ನೀಡಲಾಗಿದೆ. ಹಿರಿಯನಾಗರಿಕರಿಗೆ ಗೌರವ ಕಾರ್ಯಕ್ರಮ ನಡೆಸಲಾಗಿದ್ದು, ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ಮೂಲ್ಕಿ ಲಯನ್ಸ್ ಪದಾಧಿಕಾರಿಗಳಾದ ಸುಜಿತ್ ಸಾಲ್ಯಾನ್, ಮಾಜಿ ಅಧ್ಯಕ್ಷೆ ಶೀತಲ್ ಸುಶೀಲ್, ಸುಶೀಲ್ ಬಂಗೇರ, ಉದಯ ಅಮೀನ್ ಮಟ್ಟು, ಶೋಭಾ ಸುಜಿತ್, ಕಿಶೋರ್ ಶೆಟ್ಟಿ ಬಪ್ಪನಾಡು, ಧನಂಜಯ ಮಟ್ಟು, ರಂಗನಾಥ ಶೆಟ್ಟಿ, ಪ್ರಬೋದ್ ಕುಡ್ವ, ಭಾನುಮತಿ ಶೆಟ್ಟಿ ಕಕ್ವ ಗುತ್ತು, ದೇವ ಪ್ರಸಾದ್ ಪುನರೂರು ಉಪಸ್ಥಿತರಿದ್ದರು.

