photo credit : ravi digitals padubidri
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ
(Padubidri) ಪಡುಬಿದ್ರಿ : ಶಿಲಾಮಯ ನೂತನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಳದ ಶಿಲಾನ್ಯಾಸವು ಬುಧವಾರ ಬೆಳಿಗ್ಗೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಎಲ್ಲಾ ವರ್ಗದವರು ಜೀರ್ಣೋದ್ಧಾರ ಕಾರ್ಯಕ್ಕೆ ಕೈಗೂಡಿಸಿರುವುದು ಶುಭ ಲಕ್ಷಣವಾಗಿದೆ. ಪುನರ್ ನಿರ್ಮಾಣ ಕಾರ್ಯವು ನಮ್ಮ ಜೀವಮಾನದಲ್ಲಿ ಬಂದಂತಹ ಸುಸಂದರ್ಭ. ಸರ್ವರ ಸಹಕಾರ ದೊರೆತು, ಮನಸ್ಸಿನ ಅಧಿದೇವತೆಯಾದ ರುದ್ರದೇವರು ಹಾಗೂ ಗಣಪತಿ ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಆಶೀರ್ವದಿಸಿದರು.
ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನದೊಂದಿಗೆ ಏಕಾದಶ ಕೋಟಿ ಜಪಯಜ್ಞದ ಶಿವ ಮಂತ್ರ ಮತ್ತು ಗಣಪತಿ ಮಂತ್ರ ಉಪದೇಶಕ್ಕೆ ಚಾಲನೆ ನೀಡಿ ಸಾರ್ವಜನಿಕರಾದಿಯಾಗಿ ಪಠಿಸಿದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿದರು.
ದೇವಳದ ಗುತ್ತಿಗೆದಾರ ಸುಜಯ್ ಶೆಟ್ಟಿ ಮತ್ತು ದಾನಿ ಅಶೋಕ್ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೀಣೋದ್ಧಾರ ಸಮಿತಿ ಅಧ್ಯಕ್ಷ, ಎಂ.ಆರ್.ಜಿ.ಗ್ರೂಪ್ ಕಾರ್ಯಾಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಭಾಗವಾಗಿದೆ. 9 ವರ್ಷದ ಕನಸು ನನಸಾದ ಸಮಯ. ಜೀಣೋದ್ಧಾರದ ಜವಾಬ್ದಾರಿ ನನ್ನ ಪಾಲಿಗೆ ಬಂದ ಸೌಭಾಗ್ಯ ಎಂದು ಭಾವಿಸಿ, ಭಕ್ತಿಪೂರ್ವಕವಾಗಿ ಸರ್ವರೂ ಒಂದಾಗಿ ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭ ಕ್ಷೇತ್ರದ ತಂತ್ರಿವರ್ಯರಾದ ಕಂಬ್ಳಕಟ್ಟ ರಾಧಾಕೃಷ್ಣ ತಂತ್ರಿ, ಅನುವಂಶಿಕ ಮೋಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಕೊರ್ನಾಯ ಪದ್ಮನಾಭ ರಾವ್, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಕ್ಷೇತ್ರದ ಅರ್ಚಕರಾದ ಪದ್ಮನಾಭ ಭಟ್, ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಜೀಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು, ದೇವಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಜೀಣೋದ್ಧಾರ ಸಮಿತಿ ಕಾರ್ಯದರ್ಶಿ ವೈ. ಸುಕುಮಾರ್ ಸ್ವಾಗತಿಸಿದರು. ರಾಮಚಂದ್ರ ಆಚಾರ್ಯ ನಿರೂಪಿಸಿದರು. ಶ್ರೀನಾಥ ಹೆಗ್ಡೆ ನಡ್ಸಾಲು ಗುತ್ತು ವಂದಿಸಿದರು.
