ಶಿರ್ವ ಗ್ರಾಪಂಗೆ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿ ನೇಮಿಸುವಂತೆ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಆಗ್ರಹ.
ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲೊಂದಾದ ಶಿರ್ವ ಗ್ರಾಮ ಪಂಚಾಯತ್
(Shirva) ಶಿರ್ವ: ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲೊಂದಾದ ಶಿರ್ವ ಗ್ರಾಮ ಪಂಚಾಯತ್ ಸುಮಾರು 15000 ಜನಸಂಖ್ಯೆಯನ್ನು ಹೊಂದಿದೆ. 34 ಮಂದಿ ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯತ್ ಆಗಿದ್ದು, ಇಲ್ಲಿ ದಿನನಿತ್ಯ ನೂರಾರು ಜನರು ತಮ್ಮ ಅರ್ಜಿ ಹವಾಲುಗಳೊಂದಿಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡುತ್ತಿರುತ್ತಾರೆ. ಬೇರೆ ಬೇರೆ ರೀತಿಯ ಸಮಸ್ಯೆಗಳು, ಅಹವಾಲುಗಳಿದ್ದು, ಸದ್ರಿ ಗ್ರಾಮಸ್ಥರಿಗೆ ಸರಿಯಾದ ಸ್ಪಂದನೆ ದೊರೆಯದೇ ಇರುವುದರಿಂದ ಇಲ್ಲಿಗೆ ಒರ್ವ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಯವರನ್ನು ಕೂಡಲೇ ನೇಮಿಸುವಂತೆ ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಆಗ್ರಹಿಸಿದ್ದಾರೆ.
ಈ ಹಿಂದೆ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯವರು ಪ್ರಸ್ತುತ ಕಳೆದ ಒಂದು ತಿಂಗಳಿನಿಂದ ತಾಲೂಕು ಪಂಚಾಯಿತಿಗೆ ವರ್ಗಾವಣೆಯಾಗಿದ್ದು, ಗ್ರಾಮ ಪಂಚಾಯತಿಗೆ ವಾರದಲ್ಲಿ ಮೂರು ದಿನ ಎಂಬಂತೆ ಬೇರೆ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯವರನ್ನು ನಿಯೋಜನೆ ಮಾಡಿರುತ್ತಾರೆ. ಇಲ್ಲಿಗೆ ನಿಯೋಜನೆಗೊಂಡಿರುವ ಅಭಿವೃದ್ಧಿ ಅಧಿಕಾರಿಯವರು ಹತ್ತಿರದ ಬೇರೊಂದು ಗ್ರಾಮ ಪಂಚಾಯತ್ ನಲ್ಲಿಯೂ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ನಮ್ಮ ಶಿರ್ವ ಗ್ರಾಮ ಪಂಚಾಯತಿನಲ್ಲಿ ಸರಿಯಾದ ರೀತಿಯಲ್ಲಿ ಅವರಿಗೆ ಕರ್ತವ್ಯ ನಿರ್ವಹಿಸಲು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಷ್ಟ ಸಾಧ್ಯವಾಗಿದೆ ಎಂದು ಗ್ರಾಮಸ್ಥರು ದೂರಿಕೊಂಡಿರುತ್ತಾರೆ.
ಇಲ್ಲಿ ಲೆಕ್ಕ ಸಹಾಯಕರ ಹುದ್ದೆಯೂ ಖಾಲಿ ಇರುವುದು ಮಾತ್ರವಲ್ಲದೆ ಗ್ರಾಮ ಪಂಚಾಯತಿನ ಸಿಬ್ಬಂದಿಗಳು ಸರಕಾರದ ಬೇರೆ ಬೇರೆ ಆದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ಅಭಿಯಾನಗಳು, ಎಸ್ಐಆರ್ ಪ್ರಕ್ರಿಯೆ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ಮೇಲೂ ಕೆಲಸದ ಒತ್ತಡವು ಜಾಸ್ತಿಯಾಗಿದ್ದು ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಅಹವಾಲುಗಳಿಗೆ ನಿಗದಿತ ಸಮಯದಲ್ಲಿ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಶಿರ್ವ ಗ್ರಾಮ ಪಂಚಾಯತಿಗೆ ಈ ಕೂಡಲೇ ಪೂರ್ಣ ಕಾಲಿಕ ಅಭಿವೃದ್ಧಿ ಅಧಿಕಾರಿಯವರನ್ನು ನೇಮಿಸಿಕೊಳ್ಳಬೇಕಾಗಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಯಾವುದೇ ಒಂದು ವ್ಯವಸ್ಥೆಯಡಿಯಲ್ಲಿ ಶಿರ್ವ ಗ್ರಾಮ ಪಂಚಾಯತಿಗೆ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಯವರನ್ನು ನೇಮಿಸಿ ಪಂಚಾಯತಿನ ಎಲ್ಲಾ ಕಾರ್ಯ ಯೋಜನೆಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳು, ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ, ಆಯುಕ್ತರು, ಗ್ರಾಮೀಣಾಭಿವೖದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ, ಶಾಸಕರು, ಕಾರ್ಯನಿರ್ವಹಣಾ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾಪು ಇವರಿಗೂ ಮನವಿ ಪ್ರತಿಗಳನ್ನು ಕೇ ಆರ್ ಪಾಟ್ಕರ್ ಕಳುಹಿಸಿದ್ದಾರೆ.

