# Tags
#ಅಪರಾಧ

  ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆಗೆ ಉಡುಪಿ ಕಾಂಗ್ರೆಸ್ಸಿಗರ ಬಿಗಿಪಟ್ಟು: ಶಾಸಕ ಸುನಿಲ್ ಕುಮಾರ್ ಗೆ ಮತ್ತೆ ಸಂಕಷ್ಟ, ಪ್ರಕರಣ ಸಿಐಡಿಗೆ (Udupi Congressmen Demand For Investigation Of Parashuram Theme Park, CID Enquiry starts)  

  ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆಗೆ ಉಡುಪಿ ಕಾಂಗ್ರೆಸ್ಸಿಗರ ಬಿಗಿಪಟ್ಟು: ಶಾಸಕ ಸುನಿಲ್ ಕುಮಾರ್ ಗೆ ಮತ್ತೆ ಸಂಕಷ್ಟ, ಪ್ರಕರಣ ಸಿಐಡಿಗೆ

ಕಾರ್ಕಳ; ಕಾರ್ಕಳದ ಬೈಲೂರಿನ ಉಮಿ ಕುಂಜ ಬೆಟ್ಟದಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ (Karkala MLA Sunil Kumar) ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿ, 2023ರ ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ ನ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು ಎಂದು ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಆಪ್ರಯುಕ್ತ ರಾಜ್ಯ ಸರಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದೆ.

 ಸರ್ಕಾರವು ಈ ಪಾರ್ಕ್ ಬಗ್ಗೆ ತನಿಖೆ ಆರಂಭಿಸದೇ ಇದ್ದರೆ ತಾವು ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು.

   ತನಿಖೆಯ ಬಗ್ಗೆ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ, ನಮ್ಮ ಹೋರಾಟಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಆದ್ದರಿಂದ ತನಿಖೆ ಆರಂಭಿಸುವ ತನಕ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮನ್ನೂ ಸೇರಿಕೊಂಡು ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರು ದೂರ ಉಳಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗಿಶ್ ಆಚಾರ್ಯ ಇನ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಇಂಥದ್ದೊಂದು ಪೋಸ್ಟ್ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಸಂಚಲನ ಉಂಟುಮಾಡಿದೆ. ನನ್ನ ನಿರ್ಧಾರವು ಕಾರ್ಕಳದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ನಿರ್ಧಾರವೂ ಆಗಿದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

 ಇದು ಕೇವಲ ನನ್ನೊಬ್ಬನ ನಿರ್ಧಾರವಲ್ಲ ಇತ್ತೀಚೆಗೆ ಕಾರ್ಕಳ ಬ್ಲಾಕ್ ಸಮಿತಿಯ ಸಭೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಕುಶಲ ಶೆಟ್ಟಿ ಅವರು ಆಗಮಿಸಿದ್ದು, ಅವರು ಸೇರಿದಂತೆ ಕಾರ್ಕಳದ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾರ್ಕಳ ಬ್ಲಾಕ್ ಅಧ್ಯಕ್ಷರ ಸಮ್ಮುಖದಲ್ಲೇ ಎಲ್ಲಾ ಕಾರ್ಯಕರ್ತರು ತಮ್ಮ ನಿರ್ಧಾರವನ್ನು ಪ್ರಕಟಿಸಿ, ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು ಈ ಬಗ್ಗೆ ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದರೂ ಈ ವರೆಗೆ ತನಿಖೆ ಯಾವ ಹಂತದಲ್ಲಿದೆ ಎಂಬ ಕುರಿತು ಮಾಹಿತಿ ಇಲ್ಲ ಎಂದು ಅವರು ಬೇಸರಿಸಿದ್ದರು.

  ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಈ ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2023ರ ಜ. 17ರಂದು ಉದ್ಘಾಟಿಸಿದ್ದರು. ಇಡೀ ಥೀಮ್ ಪಾರ್ಕ್ ಅನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಬೃಹತ್ತಾದ ಪರಶುರಾಮನ ಪುತ್ಥಳಿ, ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರ ಇವೆ.

ಪರಶುರಾಮನ ಪುತ್ಥಳಿಯು 53 ಅಡಿ ಎತ್ತರವಿದ್ದು, 15 ಟನ್ ತೂಕವಿದೆ. ಇದನ್ನು ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣನಾಯ್ಕ ಅವರು ನಿರ್ಮಿಸಿದ್ದಾರೆ. ಈ ಮೂರ್ತಿಗೆ ಕಂಚು ಮತ್ತು ಉಕ್ಕು ಬಳಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಪುತ್ಥಳಿಯನ್ನು ಫೈಬರ್ ನಿಂದ ನಿರ್ಮಿಸಲಾಗಿದ್ದು, ಉಕ್ಕು ಮತ್ತು ಕಂಚಿನ ಪುತ್ಥಳಿಗಿಂತ ಕಡಿಮೆ ಖರ್ಚಿನಲ್ಲಿ ಈ ಪುತ್ಥಳಿ ನಿರ್ಮಿಸಲಾಗಿದೆ. ಕಂಚು, ಉಕ್ಕು ಬಳಸಲಾಗಿದೆ ಎಂದು ಹೇಳಿ ಆ ಹಣವನ್ನು ಈ ಥೀಮ್ ಪಾರ್ಕ್ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದ ಸ್ಥಳೀಯ ಶಾಸಕರು (ಸುನಿಲ್ ಕುಮಾರ್) ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಉದ್ಘಾಟನೆಯಾದ ನಂತರ ನಾಪತ್ತೆಯಾಗಿದ್ದ ಪುತ್ಥಳಿ!

ಕಾಂಗ್ರೆಸ್ ಆರೋಪಗಳಿಗೆ ಪೂರಕವಾಗಿ ಈ ಪುತ್ಥಳಿಯ ಸತ್ಯಾಸತ್ಯತೆಗಳು ಬಹಿರಂಗವಾಗಬೇಕು ಎಂದು ಕೂಗೆಬ್ಬಿಸಿದ್ದರು. ಇದೆಲ್ಲದರ ನಡುವೆ, 2023ರ ಅಕ್ಟೋಬರ್ ತಿಂಗಳಲ್ಲಿ ಥೀಮ್ ಪಾರ್ಕ್ ನಲ್ಲಿದ್ದ ಪುತ್ಥಳಿ ಏಕಾಏಕಿ ನಾಪತ್ತೆಯಾಗಿತ್ತು. ಇದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿತ್ತು. ಪುತ್ಥಳಿ ಹುಡುಕಿಕೊಡಬೇಕೆಂಬು ದಿವ್ಯಾ ನಾಯಕ್ ಎಂಬುವರು ಪೊಲೀಸರಲ್ಲಿ ದೂರು ನೀಡಿದ್ದರು. ಇದೆಲ್ಲದರ ನಡುವೆ, ಫೈಬರ್ ಪುತ್ಥಳಿ ನಿರ್ಮಿಸಿ ಶಾಸಕ ಸುನೀಲ್ ಕುಮಾರ್ ಹಣ ಬಾಚಿಕೊಂಡಿದ್ದಾರೆ. ಈಗ ಜನರು ಪುತ್ಥಳಿಯ ಸತ್ಯಾಸತ್ಯತೆ ಸಾಬೀತುಪಡಿಸಿ ಎಂದಾಗ ಮೂರ್ತಿಯನ್ನು ಅವರೇ ಹೊತ್ತೊಯ್ದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ರಾಜ್ಯ ಸರಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಕಾರ್ಯಕರ್ತರ ಬಾಯಿ ಮುಚ್ಚಿಸಿದೆ. ಇದರ ಪರಿಣಾಮ ಏನು ಎಂದು ಕಾದುನೋಡಬೇಕಿದೆ.

Leave a comment

Your email address will not be published. Required fields are marked *