# Tags
#ಕರಾವಳಿ #ರಾಜಕೀಯ #ವಿಡಿಯೋ

ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ (Jayakrisna Parisara Premi Samithi Demands to name Mangaluru Airport after Late George Fernandes)

ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ

 ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ (Thonse Jayakrishna Shetty) ಒತ್ತಾಯಿಸಿದ್ದಾರೆ.

 ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿದ ಅವರು, ‘ತುಳುನಾಡಿನ ಅಭಿವೃದ್ದಿಯ ಹರಿಕಾರ, ಪ್ರಗತಿಯ ಹುರಿಕಾರ, ಸರ್ವಾಭಿವೃದ್ದಿಯ ಗುರಿಕಾರ’ ನಾಗಿ ತುಳು ಕನ್ನಡ ಕರಾವಳಿಯ, ಕರ್ನಾಟಕ ರಾಜ್ಯದ ಅಷ್ಟೆ ಏಕೆ ಸಮಗ್ರ ಭಾರತೀಯ ರಾಜಕಾರಣದ ಕಣ್ಮಣಿಯಾಗಿ ಶೋಭಿಸಿದ ಗೌರವಾನ್ವಿತ ಶ್ರೀ ಜಾರ್ಜ್ ಫೆರ್ನಾಂಡಿಸ್‍ ಅವರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬಹುಕಾಲದ ಆಗ್ರಹವಾಗಿದೆ.

 ತುಳುನಾಡಿನ ಜನರು ನಿರಂತರ ಸಾಧನಾ ಶೀಲರು. ಸದಾ ಪ್ರಗತಿಪರರು, ಹೊಸತನದ ಶೋಧಕರು,ಸಾಧಕರು. ಸ್ವಾತಂತ್ರೋತ್ತರ ಭಾರತದಲ್ಲಿ 60 ರ ದಶಕದ ನಂತರ ಇದಕ್ಕೆ ಹೊಸ ವ್ಯಾಪ್ತಿ- ವಿಸ್ತಾರ ನೀಡಿದವರು ಶ್ರೀ ಜಾರ್ಜ್ ಫೆರ್ನಾಂಡಿಸ್.

ಅದು ಮಂಗಳೂರು ಮುಂಬಯಿ ನಡುವಣ ಸಂಚಾರಕ್ಕೆ  ವರದಾನವಾಗಿ ದೊರೆತ ಕೊಂಕಣ ರೈಲ್ವೆ ಇರಬಹುದು,

ಮಂಗಳೂರು – ಬೆಂಗಳೂರು ನಡುವಣ ಬ್ರಾಡ್ ಗೇಜ್ ಪರಿವರ್ತನೆ ಇರಬಹುದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಮಾಡುವ ಮೂಲಕ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿಗೊಳಿಸಿದ ಯೋಜನೆಗಳಿರಬಹುದು, ಕಾರವಾರದ ಪ್ರತಿಷ್ಠಿತ ಸೀ ಬರ್ಡ್ ಯೋಜನೆ ಹೀಗೆ ಹತ್ತಾರು ಯೋಜನೆಗಳು ಶರವೇಗ ಪಡೆದು ಸಾಕಾರಗೊಳ್ಳುವಲ್ಲಿ ಅವರ ಬದ್ದತೆ, ದೂರದೃಷ್ಟಿ ಮತ್ತು ಅವರ ಕಾರ್ಯಕ್ಷಮತೆಗೆ ಸಾಟಿಯೆ ಇರಲಿಲ್ಲ.

 ಇನ್ನಾವುದೇ ರಾಜಕಾರಣಿಗೆ ಸಾಧ್ಯವಾಗದ ರೀತಿಯಲ್ಲಿ ಅವರಿದನ್ನು ಸಾಧ್ಯವಾಗಿಸಿ ಕಾರ್ಯಗತಗೊಳಿಸಿ ತುಳು ನಾಡಿನ- ಕನ್ನಡ ಕರಾವಳಿಯ ಅಭಿವೃದ್ದಿಗೆ ಹೊಸ ದಿಕ್ಕು ದೆಸೆಗಳನ್ನುನೀಡಿ ಅಮರರಾಗಿದ್ದಾರೆ.

 *ರಾಷ್ಟ್ರ ರಾಜಕಾರಣವಲ್ಲದೆ, ಕನಿಷ್ಟ ಮೂರು ರಾಜ್ಯಗಳ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ, ದೇಶದ ಕಾರ್ಮಿಕ ವರ್ಗದ ಹಕ್ಕುಗಳನ್ನು ದೊರಕಿಸಿ ಅವರಿಗೂ ಸೂಕ್ತ ವೇತನ-ಸೌಲಭ್ಯಗಳುಳ್ಳ ಗೌರವಯುತ ಬಾಳ್ವೆ ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸುತ್ತಾ ಅವರಿಗಾಗಿ ಶ್ರಮಿಸುತ್ತಿದ್ದರೂ, ಕರ್ನಾಟಕದ-ಅವರು ಜನಿಸಿದ ತುಳುನಾಡಿನ ಜನತೆಗೆ ಎಂದೆಂದೂ ಮರೆಯಲಾಗದ ಕಾಣ್ಕೆಯನ್ನಿತ್ತು‌ ಹೋದರು. ಜನರೆದೆಗಳಲ್ಲಿ ಅಮರರಾದರು.

 ಇತ್ತೀಚೆಗೆ ವಿಧಾನಸಭೆಯಲ್ಲಿ ಪ್ರತಿಪಾದಿಸಲ್ಪಟ್ಟಿರುವ ಎರಡು ಹೆಸರುಗಳು (ಕೋಟಿ ಚೆನ್ನಯ, ರಾಣಿ ಅಬ್ಬಕ್ಕ) ಈಗಾಗಲೆ ನಮ್ಮ ಸಾಂಸ್ಕೃತಿಕ ಚರಿತ್ರೆಯ, ನಾಡ ಇತಿಹಾಸದ ಭಾಗವಾಗಿರುವವುಗಳು. ರಾಷ್ಟ್ರ ಸ್ವಾತಂತ್ರ್ಯ ಹೋರಾಟದ ಭಾಗ. ನೆಲದ ಕೆಚ್ಚಿನ ಪ್ರತೀಕ.

ಕೋಟಿ- ಚನ್ನಯರು ನಾಡ ವೀರರ ಸ್ವಾಭಿಮಾನ, ಸ್ವಂತಿಕೆ ಹಾಗೂ ಶೌರ್ಯದ ಭಾಗ.

ಸಮುದಾಯದ ಜನಾಂಗದ ಬಂಡಾಯದ ಭಾಗ.

ನಮ್ಮಸಾಹಿತ್ಯದ ಸಂಸ್ಕೃತಿಯ ಭಾಗವಾಗಿ ಎಂದಿಗೂ ನಮ್ಮ ನಡುವೆ ಇರುವಂತವುಗಳು. ಸಾಕಷ್ಟು ಕಡೆ ರಸ್ತೆ, ನಗರ ವೃತ್ತಗಳಿಗೆ ನಾಮಕರಣಗೊಂಡವುಗಳು.

ಎರಡೂ ಹೆಸರುಗಳಲ್ಲಿ ಅಧ್ಯಯನ ಕೇಂದ್ರಗಳು, ಪೀಠಗಳು ಸರಕಾರಿ ವಲಯದಲ್ಲು‌ ಸ್ಥಾಪನೆಗೊಂಡಿವೆ.

ನಮ್ಮ ಕಲಿಕೆಯ-ಅಧ್ಯಯನ ಸಾಮಾಗ್ರಿಯ ಭಾಗ ನಮ್ಮ ಆರಾಧನೆಯ ಭಾಗವಾಗಿವೆ. ನಮ್ಮ ಜನಪದದ, ಯಕ್ಷಗಾನದ ಭಾಗಗಳಾಗಿ ನಿತ್ಯ ಬಿತ್ತರಗೊಳ್ಳುತ್ತಲೇ ಇವೆ. ಅರ್ಥಾತ್ ನಮ್ಮ ನಾಡಲ್ಲಿ ಈ ಎರಡೂ ಹೆಸರುಗಳಿಗೆ  ಎಂದೂ ಅಳಿವಿಲ್ಲ. ಆದರೆ ಎಲ್ಲೂ ಅಂತಹ ಸ್ಥಾವರಗಳು, ಸ್ಮಾರಕಗಳು, ಕೇಂದ್ರಗಳು, ಜಾರ್ಜ್ ಹೆಸರಲ್ಲಿಲ್ಲ.

ಆದರೆ ಈ ಸಂದರ್ಭದಲ್ಲಿ ಯಾಕೆ ಜಾರ್ಜ್ ಹೆಸರೇ ಸೂಕ್ತ?

ಒಂದು ಜೀವಿತಾವಧಿ ಪೂರ್ಣ ಸರಳ,  ಪಾರದರ್ಶಕ ರಾಜಕಾರಣದಲ್ಲಿ, ಬಹಳಷ್ಟನ್ನು ಸಾಧಿಸಿ ಬೆಟ್ಟದಷ್ಟು ಸಾಧನೆಯನ್ನು ಬಿಟ್ಟು ಹೋದವರು. ಪ್ರತಿಯಾಗಿ ಫಲಾನುಭವಿ ಜನತೆ ಅವರಿಗೇನನ್ನೂ ಕೊಟ್ಟಿಲ್ಲ.  

ನಾವು ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವ ಕಿಂಚಿತ್ ಪ್ರತಿ ಗೌರವವನ್ನಾದರೂ ನೀಡಿ, ಋಣ ಭಾರವನ್ನು ತಗ್ಗಿಸಿಕೊಳ್ಳಬೇಕು. ಒಂದೊಮ್ಮೆ ಈ ಪೀಳಿಗೆ, ಅವರೊಂದಿಗೆ ಬದುಕಿದ್ದ ನಮ್ಮ ಪೀಳಿಗೆ ಅವರನ್ನು ಮರೆತು ಸೂಕ್ತ ವಾಗಿ ಅವರ ಹೆಸರನ್ನು ನಾಮಕರಣ ಮಾಡದೆ ಹೋದರೆ, ಮುಂದೆ ಒಂದೆರಡು ದಶಕಗಳಲ್ಲಿ ಅವರ ಹೆಸರು ಸರಕಾರದ ಬಳಿಯ ಕಡತಗಳಲ್ಲಷ್ಟೆ ಉಳಿಯಬಹುದು. ಬಾಹ್ಯ ಬದುಕಿನಲ್ಲಿ ಅಳಿದು ಹೋಗಬಹುದು.

 ಅವರು ಕರ್ನಾಟಕದ, ಅವರು ಜನಿಸಿದ ತುಳುನಾಡಿನ ಜನತೆಗೆ ಎಂದೆಂದೂ ಮರೆಯಲಾಗದ ಕಾಣಿಕೆಯನ್ನಿತ್ತು‌ ಹೋದರು. ಜನರೆದೆಗಳಲ್ಲಿ ಅಮರರಾದರು.

ನಾವು ಈ ಪೀಳಿಗೆ ಬಹು ಜವಾಬ್ದಾರಿ ಹೊಂದಿದ್ದು, ಅವರ ಕಾಣಿಕೆಯನ್ನು ಉಳಿಸುವ ಕೆಲಸವನ್ನು ಅವರ ನಾಮಕರಣದ ಮೂಲಕ ಮಾಡಬೇಕು. ಅದು ನಮ್ಮ ಹೊಣೆಯೂ ಹೌದು. ಇಲ್ಲದೆ ಹೋದರೆ ಇತಿಹಾಸಕ್ಕೆ ಅಕ್ಷಮ್ಯ ಅಪಚಾರ ಮಾಡಿದ ಆರೋಪ ಶಾಶ್ವತ ನಮ್ಮ ಮೇಲಂಟಬಹುದು.

ಆದುದರಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಈ ಬೇಡಿಕೆಯನ್ನು , ಹಕ್ಕೊತ್ತಾಯವನ್ನು‌ಮತ್ತೊಮ್ಮೆ ಸೂಕ್ತವಾಗಿ ಪ್ರಚುರ ಪಡಿಸಿ ಸರಕಾರಕ್ಕೆ ಮತ್ತು ಸಂಬಂಧಪಟ್ಟವರಿಗೆ ತಲುಪಿಸಬೇಕೆಂದು ಸಮಿತಿಯ  ಮೂಲಕ ಕೋರುತ್ತೇವೆ ಎಂದೂ ಜಯಕೃಷ್ಣ ಶೆಟ್ಟಿ ಹೇಳಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಪ್ರಕಾಶ್ ಶೆಟ್ಟಿ (Arun Prakash Shetty), ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ (Surendra Mendon) ಉಪಸ್ಥಿತರಿದ್ದರು

Leave a comment

Your email address will not be published. Required fields are marked *