# Tags
#PROBLEMS

ಕುಂದಾಪುರ : ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಹಂದಿ ಫಾರಂಗೆ ಸ್ಥಳೀಯರ ವಿರೋಧ (Kundapura : local opposition for Fish mill, illegal mining and pig farm)

ಕುಂದಾಪುರ : ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಹಂದಿ ಫಾರಂಗೆ ಸ್ಥಳೀಯರ ವಿರೋಧ

(Kundapura) ಕುಂದಾಪುರ : ಇಲ್ಲಿಯ ಕೆರಾಡಿ ಮೋರ್ಟು ಪಾರಿಜೆಡ್ಡು ಬಳಿಯ ಮೂಕಾಂಬಿಕಾ ಅಭಯಾರಣ್ಯದ ಅತೀ ಸೂಕ್ಷ್ಮ ಪ್ರದೇಶದ ಮಧ್ಯ ಅತೀ ಎತ್ತರ ಪ್ರದೇಶದಲ್ಲಿ ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಮರದ ಸಾಗಾಟ, ಹಾಗೂ ಕಲ್ಲು ಬಾವಿ ಹತ್ತಿರ ಇರುವ ಹಂದಿ ಫಾರಂ  ಇವುಗಳನ್ನು  ನಡೆಸುತ್ತಿರುವುದರಿಂದ  ಸಾರ್ವಜನಿಕರಿಗೆ ತೊಂದರೆ ಆಗುವುದರ ಜೊತೆಗೆ  ಗುಡ್ಡ ಕುಸಿತದ ಭೀತಿ ಎದುರಾಗುತ್ತಿದೆ ಎಂದು ಮೊರ್ಟು, ಹೊಕ್ಕೊಳಿ, ತುಂಬಿಬೇರು ಗ್ರಾಮಸ್ಥರಿಂದ ಕೆರಾಡಿ ಗ್ರಾಮ ಪಂಚಾಯತ್ ಎದುರುಗಡೆ ಬ್ರಹತ್ ಪ್ರತಿಭಟನೆ ನಡೆಯಿತು.

 ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕುಂದಾಪುರ ತಹಸಿಲ್ದಾರ್ ಶೋಭಾಲಕ್ಷ್ಮೀ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು.

ಅವರು ಈ ಸಂದರ್ಭ ಮಾತನಾಡಿ, ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುತ್ತೇನೆ. ಸರಕಾರಿ ಜಾಗದಲ್ಲಿರುವ ಮರವನ್ನು ಕಡಿದ ವ್ಯಕ್ತಿಯ ಮೇಲೆ ಅರಣ್ಯ ಇಲಾಖೆಯವರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿ ರಸ್ತೆ ನಿರ್ಮಾಣ ಮಾಡಿದ ಸ್ಥಳ ಸರಕಾರದ್ದೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂದು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇನೆ  ಎಂದರು.

  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಮೀನು ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದ್ದು ನಿಜ. ಅದರ ವಿರುದ್ಧ ಗ್ರಾಮಸ್ಥರ ವಿರೋಧ ಇರುವುದರಿಂದ ಪರವಾನಿಗೆ ರದ್ದುಗೊಳಿಸಲು ಸೆಪ್ಟೆಂಬರ್ 20 ರಂದು ಕೆರಾಡಿ ಗ್ರಾಮ ಪಂಚಾಯತಿಯ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.       

  ಪ್ರತಿಭಟನೆಯಲ್ಲಿ ವಂಡ್ಸೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಗೀತ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕರಾದ ಸವಿತ್ರತೇಜ, ಕೊಲ್ಲೂರು ಠಾಣೆಯ ಎಸ್ಐ ಜಯಶ್ರೀ, ವಕೀಲರಾದ ಕೆರಾಡಿ ಪ್ರಶಾಂತ್ ಶೆಟ್ಟಿ, ಕೆರಾಡಿ ಪಂಚಾಯತ್ ಅಧ್ಯಕ್ಷ ಸುದರ್ಶನ್ ಶೆಟ್ಟಿ,  ಪಂಚಾಯತ್ ಸದಸ್ಯರಾದ ರಾಘವೇಂದ್ರ ಕೊಠಾರಿ, ಸಂಜೀವ ಪೂಜಾರಿ, ಗೋವಿಂದ ಪೂಜಾರಿ, ಸುದೀಪ್ ಶೆಟ್ಟಿ, ಸತೀಶ್ ಶೆಟ್ಟಿ,  ಮಂಜು ಕೊಠಾರಿ, ಸುಜಾತ ಶೆಟ್ಟಿ, ಸುಜಾತ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt1