# Tags
#ಅಪರಾಧ

ಉಡುಪಿ : ದಲಿತ ಸಮುದಾಯ ಮತ್ತು ಅಂಬೇಡ್ಕರ್ ಅವಹೇಳನ; ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಹಸಂಚಾಲಕ ಬಂಧನ (Udupi : Denigration and Dalit Community and Ambedkar, Co Convener of Hindu Jagara Vedike arrested)

ಉಡುಪಿ : ದಲಿತ ಸಮುದಾಯ ಮತ್ತು ಅಂಬೇಡ್ಕರ್ ಅವಹೇಳನ; ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಹಸಂಚಾಲಕ ಬಂಧನ

(Udupi) ಉಡುಪಿ: ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ ಸೂಡ ಎಂಬಾತನನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ.

 ಪೊಲೀಸರು ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

 ಹಿಂದೂ ಜಾಗರಣ ವೇದಿಕೆಯ ಮುಖಂಡನಾದ ಉಮೇಶ ನಾಯ್ಕ ದಕ್ಷಿಣ ಕನ್ನಡ ಮರಾಠ ಸಂರಕ್ಷಣಾ ಸಮಿತಿಯ ವಾಟ್ಸ್‌ಅಪ್ ಗುಂಪಿನಲ್ಲಿ ಹಾಕಿದ ವಾಯ್ಸ್ ಮಸೇಜ್‌ನಲ್ಲಿ ಅಂಬೇಡ್ಕ‌ರ್ ಹಾಗೂ ದಲಿತರಿಗೆ ಅಪಮಾನಕರ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

 ನವೆಂಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್‌ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಕರಾವಳಿ ಮರಾಠಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆ‌ರ್. ಅಂಬೇಡ್ಕರ್ ಫೋಟೊ ಮುದ್ರಿಸಿರುವುದು ಉಮೇಶ ನಾಯ್ಕನ ಕಂಗೆಣ್ಣಿಗೆ ಗುರಿಯಾಗಿತ್ತು. ಇದನ್ನೇ ನೆಪವಾಗಿರಿಸಿಕೊಂಡು ಹಿಂದೂ ಜಾಗರಣ ವೇದಿಕೆ ಮುಖಂಡ ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ಅವಮಾನಿಸಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದ.

ಬಂಧನದ ಬೆನ್ನಲ್ಲೇ ಹಿಂದು ಜಾಗರಣ ವೇದಿಕೆ ಮುಖಂಡ ಉಮೇಶ್ ನಾಯ್ಕ ಸೂಡ ಉಚ್ಚಾಟನೆ

  ನ ಹಿಂದೂ ಪತಿತೋ ಭವೇತ್ ಎನ್ನುವ ಘೋಷಣೆ ಹೊರಟ ಉಡುಪಿಯ ಪಾವನ ಮಣ್ಣಿನಲ್ಲಿ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ದಲಿತ ಬಂಧುಗಳ ಬಗ್ಗೆ ಮತ್ತು ರಾಷ್ಟ್ರಪುರುಷ ಅಂಬೇಡ್ಕರ್ ಬಗ್ಗೆ ಅವಶಬ್ದಗಳನ್ನು ನುಡಿದ ಉಮೇಶ್ ಸೂಡರ ಸಮಾಜ ಒಡೆಯುವ ಮತ್ತು ರಾಷ್ಟ್ರ ನಾಯಕರ ಬಗ್ಗೆ ಅಡಿರುವ ಮಾತುಗಳನ್ನು ಹಿಂದು ಜಾಗರಣ ವೇದಿಕೆ ಖಂಡಿಸುತ್ತದೆ. ಮತ್ತು ತಕ್ಷಣದಿಂದ ಹಿಂದು ಜಾಗರಣ ವೇದಿಕೆಯ ಎಲ್ಲಾ ಜವಾಬ್ದಾರಿಯಿಂದ ಉಮೇಶ್ ಸೂಡರನ್ನು ಮುಕ್ತಗೊಳಿಸಲಾಗಿದೆ. ಅವರ ಮಾತುಗಳಿಗೆ ಸಂಪೂರ್ಣವಾಗಿ ಅವರೇ ಹೊಣೆಯಾಗಿದ್ದು, ಅವರ ಮಾತುಗಳಿಗೂ ಮತ್ತು ಹಿಂದು ಜಾಗರಣ ವೇದಿಕೆಯ ನಿಲುವಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎಂದು ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಂಯೋಜಕ ಶಂಕರ್ ಕೋಟ ತಿಳಿಸಿದ್ದಾರೆ.

 ಜಾಗೃತ, ಸಂಘಟಿತ ಹಿಂದೂ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಳೆದ 35-40 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿಂದು ಜಾಗರಣ ವೇದಿಕೆಯಲ್ಲಿ ಎಲ್ಲ ಜಾತಿ, ಸಮುದಾಯದ ಹಿಂದೂಗಳು ಒಂದಾಗಿ ಯುವಕರಲ್ಲಿ ರಾಷ್ಟ್ರಭಕ್ತಿ, ಧರ್ಮನಿಷ್ಠ ಬೆಳಸುವ ಕಾರ್ಯದಲ್ಲಿ ನಿರತರಾಗಿದ್ದು, ಇಂತಹ ಅಪಸವ್ಯಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ ಎಂದೂ  ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಂಯೋಜಕ ಶಂಕರ್ ಕೋಟ ತಿಳಿಸಿದ್ದಾರೆ.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2