# Tags
#PROBLEMS #protest

ಪಡುಬಿದ್ರಿ ಗ್ರಾಪಂ ಕಚೇರಿ ವಿದ್ಯುತ್ ಕಡಿತ: ಮೆಸ್ಕಾಂ ವಿರುದ್ದ ಪಂಚಾಯತ್‌ ಸದಸ್ಯರ ಆಕ್ರೋಶ (Padubidri Panchayath Office power cut ; Panchayath members outrage against Mescom Padubidri)

ಪಡುಬಿದ್ರಿ ಗ್ರಾಪಂ ಕಚೇರಿ ವಿದ್ಯುತ್ ಕಡಿತ: ಮೆಸ್ಕಾಂ ವಿರುದ್ದ ಪಂಚಾಯತ್‌ ಸದಸ್ಯರ ಆಕ್ರೋಶ

ಮೆಸ್ಕಾಂ ಕಚೇರಿ ಎದುರು ಧರಣಿ:

 ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂಚಾಯಿತಿಯ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಕೆಇಬಿಯು ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಇದರಿಂದ ಪಂಚಾಯಿತಿ ಆಡಳಿತಕ್ಕೆ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಪಡುಬಿದ್ರಿ ಮೆಸ್ಕಾಂ ಮುಂಭಾಗ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

 ಕುಡಿಯುವ ನೀರು ಪೂರೈಕೆ ಹಾಗೂ ದಾರಿದೀಪಗಳ ಆರು ತಿಂಗಳ 19.59 ಲಕ್ಷ ರೂ. ಬಾಕಿ ಇದ್ದು, ಇದರಲ್ಲಿ ಎರಡು ಲಕ್ಷ ರೂ. ಪಾವತಿಸಲಾಗಿತ್ತು. ಆದರೆ ಉಳಿದ 17.56ಲಕ್ಷ ರೂ. ಮೊತ್ತ ಬಾಕಿ ಪಾವತಿ ಆಗಬೇಕಾದ ಹಿನ್ನಲೆಯಲ್ಲಿ, ಮೂಲಸೌಕರ್ಯ ಹಿನ್ನಲೆಯಲ್ಲಿ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಬೆಳಗ್ಗೆ ಕಡಿತಗೊಳಿಸಲಾಯಿತು.

  ಇದರಿಂದ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೇತೃತ್ವದಲ್ಲಿ ಮೆಸ್ಕಾಂ ಕಚೇರಿಗೆ ತೆರಳಿ ಮೆಸ್ಕಾಂ ಶಾಖಾಧಿಕಾರಿ ಪ್ರೀತಮ್ ಯು. ನಾಯಕ್ ಅವರಿಗೆ ಘೆರಾವ್ ಹಾಕಿ ಗ್ರಾಮ ಪಂಚಾಯಿತಿ ಸದಸ್ಯರು ಮೆಸ್ಕಾಂ ಹಾಗೂ ಅಧಿಕಾರಿಗಳ  ವಿರುದ್ಧ ಘೋಷಣೆ ಕೂಗಿದರು.

 ಸ್ಥಳಕ್ಕೆ ಕಾಪು ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅರವಿಂದ್ ಭೇಟಿ ನೀಡಿ ಮೇಲಾಧಿಕಾರಿಗಳ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಅವರ ಸೂಕ್ತ ನಿರ್ದೇಶನಗಳೇನಾದರೂ ಬಂದರಷ್ಟೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

 ಆದರೆ ಇದಕ್ಕೆ ಸದಸ್ಯರು ತೃಪ್ತರಾಗಲಿಲ್ಲ. ನ್ಯಾಯ ಸಿಗುವವವರೆಗೂ ಧರಣಿ ಮುಂದುವರಿಸುವುದಾಗಿ ಪಂಚಾಯಿತಿ ಜನಪ್ರತಿನಿಧಿಗಳು ಎಚ್ಚರಿಸಿದರು. ಈ ವೇಳೆ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷ ರವಿ ಶೆಟ್ಟಿ, ತಮಗೆ ಜನತೆಯ ಕರ ವಸೂಲಿಗೆ ಆಗಿರುವ ತೊಂದರೆಗಳು ಹಾಗೂ 15ನೇ ಹಣಕಾಸಿನ ಮೂರನೇ ಕಂತು ಬಾಕಿ 33 ಲಕ್ಷ ರೂ. ಇನ್ನಷ್ಟೇ ಬರಬೇಕಾಗಿದ್ದು, ಮುಂದಿನ ದಿನಗಳಲ್ಲಿ ಬಾಕಿ ಕಂತಿನ ಪಾವತಿಯನ್ನು ಪಂಚಾಯತ್ ಮಾಡಲಿರುವುದಾಗಿ ತಿಳಿಸಿದರು.

 ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಪಿಡಿಒ ಅವರು ಕಚೇರಿಯಲ್ಲಿ ಇಲ್ಲದ ವೇಳೆ ಮೆಸ್ಕಾಂ ಪ್ರತಿನಿಧಿಗಳು ಪ್ರವೇಶಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ತೆರಳಿದ್ದಾರೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಗಿದೆ.

ಬೆಳಿಗ್ಗಿನಿಂದಲೇ ಪಡುಬಿದ್ರಿಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದು, ಧರಣಿಯನ್ನು ನಡೆಸಿದ್ದೇವೆ. ವಿದ್ಯುತ್ ಸಂಪರ್ಕ ಮರುಜೋಡಣೆಯಾಗುವವರೆಗೂ ಇದನ್ನು ಮುಂದುವರಿಸಲಿರುವುದಾಗಿ ಹೇಳಿದರು.

 ಸಂಜೆಯಾಗುತ್ತಲೇ ಆಹೋರಾತ್ರಿ ಧರಣಿಗೆ ತೀರ್ಮಾನಿಸಲಾಗಿದ್ದು, ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರಗೆ ನಡೆಯಲು ಧರಣಿ ನಿರತರು ಬಿಡದೆ ಇರುವುದರಿಂದ ಕಚೇರಿಯಲ್ಲೇ ಉಳಿಯಬೇಕಾಯಿತು. ಸಂಜೆಯ ವೇಳೆ ಎಇಇ ಅರವಿಂದ್ ಅವರು ಮತ್ತೆ ಸ್ಥಳಕ್ಕೆ ಆಗಮಿಸಿದಾಗ  ಧರಣಿ ನಿರತರು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಿದ್ಯುತ್ ಜೋಡಣೆಗೊಳಿಸುವುದಾಗಿ ಅವರು ಘೋಷಿಸಿದ ಬಳಿಕ ಧರಣಿ ನಿರತರು ಜಯಘೋಷ ಕೂಗಿದರು.

ಮುಂದಿನ ದಿನಗಳಲ್ಲಿ ಪಂಚಾಯತ್ ನಿರ್ಣಯದ ಮೂಲಕ ಗ್ರಾಮ ಪಂಚಾಯಿತಿ ರಸ್ತೆಗಳಲ್ಲಿ ಹಾಕಲಾಗಿರುವ ಮೆಸ್ಕಾಂ ಕಂಬಗಳು ಹಾಗೂ ಹಾದು ಹೋಗಿರುವ ವಿದ್ಯುತ್ ಲೈನುಗಳ ಮೇಲೂ ಶೇಕಡಾವಾರು ಕರ ವಿಧಿಸುವ ನಿಯಮವನ್ನು ಜಾರಿಗೊಳಿಸಿ ಅನುಷ್ಟಾನಿಸಲು ಪಂಚಾಯಿತಿ ಮುಂದಾಗಬೇಕಾದೀತು ಎಂದು ಎಚ್ಚರಿಸಿದರು.

 ಮೆಸ್ಕಾಂ ಉಡುಪಿ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ. ಪ್ರಸನ್ನ ಕುಮಾರ್ ಅವರಲ್ಲಿ ದೂರವಾಣಿಯಲ್ಲಿ ವಿದ್ಯುತ್ ಕಡಿತದ ಕುರಿತಾದ ಆದೇಶವನ್ನು ನೀಡಿದ್ದು, ತಮ್ಮ ಕಾರ್ಪೊರೇಟ್ ಮಟ್ಟದ ಸಭೆಯಲ್ಲೇ ಈ ಕುರಿತಾದ ನಿರ್ಣಯ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದಲ್ಲಿ ಅದರಿಂದಾಗುವ ಅಪರಿಮಿತ ತೊಂದರೆಯನ್ನು ತಪ್ಪಿಸಲು ಆಯಾಯ ಪಂಚಾಯತ್ ಕಚೇರಿಗಳ ಸಂಪರ್ಕವನ್ನು ಕಡಿತಗೊಳಿಸಲು ನಿರ್ಣಯಕೈಗೊಳ್ಳಲಾಗಿದೆ. ಜಿಲ್ಲಾದ್ಯಂತದ ಸರಕಾರಿ ಸ್ವಾಮ್ಯದ ಆಸ್ಪತ್ರೆಗಳು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮತ್ತು ಹಾಸ್ಟೆಲ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರಕಾರಿ ಕಚೇರಿಗಳು, ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲೂ ಈ ಕ್ರಮವು ಮುಂದುವರಿಯಲಿರುವುದು ಎಂದು ಖಡಕ್ ಆಗಿ ನುಡಿದರು.

 ಪಂಚಾಯಿತಿ ಸದಸ್ಯ ನವೀನ್ ಎನ್. ಶೆಟ್ಟಿ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೂ ಎಲ್ಲಾ ೩೪ ಸದಸ್ಯರೂ ಪಕ್ಷ ಬೇಧ ಮರೆತು ಧರಣಿ ನಡೆಸಿದ್ದೇವೆ. ಆದರೆ ಮೆಸ್ಕಾಂ ಅಧಿಕಾರಿಗಳು ನಮ್ಮ ಧ್ವನಿಗೆ ಸ್ಪಂಧಿಸಲಿಲ್ಲ. ಆದರೂ ಸಂಜೆಯ ವೇಳೆ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹರ್ಷವ್ಯಕ್ತಪಡಿಸಿದರು.

Leave a comment

Your email address will not be published. Required fields are marked *

Emedia Advt3 Emedia Advt1 Emedia Advt2