ಬಂಟ್ವಾಳ ಅಮ್ಮೆಮಾರ್‌ನಲ್ಲಿ 14 ಮಂದಿಯ ತಂಡದಿಂದ ಇಬ್ಬರ ಕೊಲೆಗೆ ಯತ್ನ: ಮಾರಕಾಸ್ತ್ರದಿಂದ ದಾಳಿ (Attempt Murder of two by 14 members gang at Bantwala Ammemar)
ಸಾಂದರ್ಭಿಕ ಚಿತ್ರ
ಬಂಟ್ವಾಳ ಅಮ್ಮೆಮಾರ್‌ನಲ್ಲಿ 14 ಮಂದಿಯ ತಂಡದಿಂದ ಇಬ್ಬರ ಕೊಲೆಗೆ ಯತ್ನ: ಮಾರಕಾಸ್ತ್ರದಿಂದ ದಾಳಿ
(Bantwala) ಬಂಟ್ವಾಳ: ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಪೂರ್ವದ್ಚೇಷದ ಹಿನ್ನೆಲೆಯಲ್ಲಿ 14 ಮಂದಿಯ ಯುವಕರ ತಂಡವೊಂದು ಮಾರಕಾಸ್ತ್ರದಿಂದ ದಾಳಿಗೈದು ಇಬ್ಬರ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಮಂಗಳವಾರ ತಡ ರಾತ್ರಿ 11.50 ರಿಂದ 12 ಗಂಟೆಯ ಮಧ್ಯೆ ಅಮ್ಮೆಮಾರ್ ಶಾಲಾ ಬಳಿ ಈ ಘಟನೆ ನಡೆದಿದ್ದು,
ಅಮ್ಮೆಮಾರ್ ನಿವಾಸಿಗಳಾದ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ತಲವಾರು ಹಾಗೂ ದೊಣ್ಣೆಯ ಏಟಿನಿಂದ ತೀವ್ರ ಸ್ವರೂಪದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಶರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬವರು ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ.
ಅಮ್ಮೆಮಾರ್ ನಿವಾಸಿ ತಸ್ಲೀಮ್, ಮಹಮ್ಮದ್ ಶಾಕೀರ್, ನಾಸೀರ್, ಸಿಯಾಬು, ಸೈಫುದ್ದೀನ್ ಅವರು ಮಾತನಾಡುತ್ತಿದ್ದ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿದ್ದು, ಈ ವೇಳೆ ಕರೆ ಮಾಡಿದ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದಾನೆನ್ನಲಾಗಿದೆ.
ಇವರು ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ, ಆರೋಪಿ ಮನ್ಸೂರ್ ಹಾಗೂ ಇತರರಿದ್ದು, ಆಗ ಪಲ್ಟಿ ಇಮ್ರಾನ್ ಎಂಬಾತ ತಸ್ಲೀಮ್‌ನತ್ತ ತಲವಾರು ಬೀಸಿದ್ದು, ಪರಿಣಾಮ ಬಲಕಾಲಿಗೆ ಏಟು ಬಿದ್ದಿದೆ. ಹಾಗೆಯೇ ಮತ್ತೋರ್ವ ಆರೋಪಿ ಮುಸ್ತಾಕ ಎಂಬಾತ ಬಲಗೈಗೆ ಕಡಿದಿದ್ದಾನೆ. ಸರ್ಫುದ್ದೀನ್ ಕಲ್ಲಿನಿಂದ ಹೊಡೆದಿರುತ್ತಾನೆ. ಈ ವೇಳೆ ತಸ್ಲೀಮ್ ನೆಲಕ್ಕೆ ಬಿದ್ದಾಗ, ಮನ್ಸೂರ್ ಮುಖಕ್ಕೆ ಕಡಿದಿದ್ದಾನೆಂದು ಹೇಳಲಾಗಿದೆ.
ಅದೇ ರೀತಿ ಆರೋಪಿಗಳು ತಸ್ಲೀಮ್ ಜೊತೆಗಿದ್ದ ಮಹಮ್ಮದ್ ಶಾಕೀರ್‌ಗೂ ತಲವಾರಿನಿಂದ ಹಲ್ಲೆ ಗೈದಿದ್ದು, ಆಶ್ರಫ್, ರಿಜ್ವಾನ್ ಮತ್ತು ಲತೀಫ್ ಮರದ ದೊಣ್ಣೆಯಿಂದ ಹೊಡೆದಿದ್ದಾರೆನ್ನಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತಸ್ಲೀಮ್ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಎಸ್ಪಿಭೇಟಿ: ತಂಡ ರಚನೆ
ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಅಮ್ಮೆಮಾರ್ ಶಾಲಾ ಬಳಿ ಮಂಗಳವಾರ ರಾತ್ರಿ ನಡೆದ ಯುವಕರಿಬ್ಬರ ಕೊಲೆಯತ್ನ ಘಟನೆಯ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅವರು ಅಧಿಕಾರಿಗಳೊಂದಿಗೆ ಬುಧವಾರ ಘಟನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆಗೆ ನಿರ್ದೇಶನ ನೀಡಿದ್ದಾರೆ.
ಒಂದೇ ಕೋಮಿನ ಯುವಕರ ನಡುವಿನ ಪೂರ್ವದ್ವೇಷದ ಈಪ್ರಕರಣ ಸ್ಥಳೀಯವಾಗಿಯೂ ಜನರಲ್ಲಿ ಆತಂಕವನ್ನು ಸೃಷ್ಠಿಸಿದೆ.
ಮಧ್ಯ ರಾತ್ರಿ 14 ಮಂದಿಯ ಯುವಕರ ತಂಡ ಕರೆ ಮಾಡಿ ಆಹ್ವಾನಿಸಿ ತಲವಾರು ಹಾಗೂ ದೊಣ್ಣೆಯಿಂದ ಇಬ್ಬರ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದು, ಈ ಕೃತ್ಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗಾಗಿ ಬಂಟ್ವಾಳ ಡಿ.ವೈ.ಎಸ್.ಪಿ. ವಿಜಯಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಎಸ್.ಪಿ. ಯತೀಶ್ ಎನ್ ಅವರು ವ್ಯಕ್ತಪಡಿಸಿದ್ದಾರೆ.