ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ “ದೀಪಾವಳಿ ಸಂಭ್ರಮ” ಮುಂದೂಡಿಕೆ (Moolki : Postponement of Sri Chandrashekhara Swamij’s Birth Anniversary “Deepavali Celebration”)
ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ “ದೀಪಾವಳಿ ಸಂಭ್ರಮ” ಮುಂದೂಡಿಕೆ
(Moolki) ಮೂಲ್ಕಿ : ಆಧ್ಯಾತ್ಮಿಕ ವಿಶ್ವ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಹುಟ್ಟು ಹಬ್ಬ ಹಾಗೂ ದೀಪಾವಳಿ ಸಂಭ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸಹ ಕುಟುಂಬಿಕರಾಗಿ ಯುಎಇ ಅರಬ್ ದೇಶದ ಪ್ರವಾಸದಲ್ಲಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರು ಮತ್ತು ಮೂಲ್ಕಿಯ ತಮ್ಮ ಆಶ್ರಮದಲ್ಲಿ ದೀಪಾವಳಿ ಸಂಭ್ರಮದೊಂದಿಗೆ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸಲು ಪೂರ್ವಸಿದ್ಧತೆ ನಡೆದಿತ್ತು.
ಸ್ವಾಮೀಜಿಯವರ ಚಿಕ್ಕಪ್ಪ ಮೂಲ್ಕಿ ಶಿಮಂತೂರು ನಿವಾಸಿ ರಾಘವೇಂದ್ರ ಭಟ್ ರವರ ಪತ್ನಿ ಪ್ರೇಮಾವತಿಯವರ ಅಕಾಲಿಕ ನಿಧನ ಹೊಂದಿದ ಪ್ರಯುಕ್ತ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ನಿರಂತರ ಸೇವಾ ಚಟುವಟಕೆ
ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸೇವಾಶ್ರಮದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಶೈಕ್ಷಣಿಕ ನೆರವು, ಸಾಧಕ ಕ್ರೀಡಾಳುಗಳಿಗೆ ಗೌರವ, ಮಹಿಳೆಯರಿಗೆ ಶುಭದಿನದ ಉಡುಗೊರೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ, ಸರಕಾರಿ ಹಾಗೂ ಖಾಸಗಿ ಸಂಸ್ಥೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳ ಪ್ರಮುಖರಿಗೆ ಗೌರವ ಸನ್ಮಾನ ಜೊತೆಗೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುವ ಹೈಟೆಕ್ ಬಸ್ ನಿಲ್ದಾಣವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ತಮ್ಮ ಹುಟ್ಟೂರಿನ (ಮೂಲ್ಕಿ- ಕಿಲ್ಪಾಡಿಯ ರಾಜ್ಯ ಹೆದ್ದಾರಿಯ)ಲ್ಲಿಯೇ ತೀರ್ಥರೂಪರಾದ ಕೀರ್ತಿಶೇಷ ಗೋವಿಂದ ಭಟ್ ಅವರ ಸ್ಮರಣಾರ್ಥವಾಗಿ ನಿರ್ಮಿಸಿ ಅದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಸಾರ್ವತ್ರಿಕ ಪ್ರಶಂಸೆಗೊಳಗಾಗಿದೆ.
ಈ ಬಗ್ಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ರವರು ಮಾಧ್ಯಮದ ಜೊತೆ ಮಾತನಾಡಿ , ಪ್ರತೀ ವರ್ಷವು ತಮ್ಮ ಹುಟ್ಟು ಹಬ್ಬವನ್ನು ವಿವಿಧ ಅನಾಥಶ್ರಮ ಹಾಗೂ ಬಡವರ್ಗದವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಕಾರ್ಯಕ್ರಮ ಹಾಗೂ ದೀಪಾವಳಿ ಸಂಭ್ರಮವನ್ನು ಶ್ರಮಿಕರೊಂದಿಗೆ ಆಚರಿಸತ್ತಿದ್ದು, ಶೋಷಿತ ಹಾಗೂ ಶ್ರಮಿಕರ ಏಳಿಗೆಗೆ ಸದಾ ಸ್ಪಂದಿಸುವ ಮನೋಭಾವನೆ ವರ್ಷಂಪ್ರತಿ ಹೆಚ್ಚಾಗುತ್ತಿದೆ. ಸಮಾಜದಿಂದ ಪಡೆಯುವ ನಾವು ಮರಳಿ ಸಮಾಜಕ್ಕೆ ಅರ್ಪಿಸುವ ಕೈಂಕರ್ಯಕ್ಕೆ ಹಿರಿಯರ ಆದರ್ಶವೇ ಕಾರಣ.
ಆಡಂಬರ ಇಲ್ಲದೇ ಸರಳವಾಗಿ ಕಾರ್ಯಕ್ರಮ ರೂಪಿಸುವ ಕೆಲಸ ನಮ್ಮ ಸೇವಾಶ್ರಮದ ಭಕ್ತಾಧಿಗಳು ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಮಾರ್ಗದರ್ಶನ ನೀಡುತ್ತಿದ್ದೇವೆ. ಸಮಾಜವು ಸಹ ನಮ್ಮಿಂದ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ ಎಂದು ಹೇಳಿದ್ದಾರೆ.
ನವಂಬರ್‌ನ ಮೊದಲ ವಾರದಲ್ಲಿ ಈ ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿದೆ ಎಂದು ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.