ಕಾಪು ಉಳಿಯಾರಗೋಳಿ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭ (Silver jublee Ceremony of Dandatheertha Education trusts PU College)
ಕಾಪು ಉಳಿಯಾರಗೋಳಿ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭ
ಡಾ. ಪ್ರಭಾಕರ್ ಶೆಟ್ಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ್ದ ಸೇವೆಯು ನಿತ್ಯ ಸ್ಮರಣೀಯ : ಡಾ.ಕೆ ಪ್ರಕಾಶ್ ಶೆಟ್ಟಿ
(Kaup) ಕಾಪು: ಕಾಪು ಉಳಿಯಾರಗೋಳಿ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಮಹೋತ್ಸವ ಸಮಾರಂಭವನ್ನು ಬೆಂಗಳೂರು ಎಂಆರ್‌ಜಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಕೆ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.
ಅವರು ಈ ಸಂದರ್ಬ ಮಾತನಾಡಿ, ದಂಡತೀರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೀರ್ತಿಶೇಷ ಡಾ. ಪ್ರಭಾಕರ್ ಶೆಟ್ಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ್ದ ಸೇವೆಯು ನಿತ್ಯ ಸ್ಮರಣೀಯ. ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಜನತೆಗೆ ಸಲ್ಲಿಸಿದ್ದ ಸೇವೆಯು ಅದೆಷ್ಟೋ ಜನತೆಗೆ ಜೀವದಾನ ಹಾಗೂ ಜೀವನ ನೀಡಿದೆ. ಅಂತಹ ಅದಮ್ಯ ಚೇತನ ಸದಾ ಅಜರಾಮರ. ಅವರ ನಿಸ್ವಾರ್ಥ ಸೇವೆಯ ಬಾಳಿನ ಸತ್‌ಪಥದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಿದ್ದ ಕೀರ್ತಿಶೇಷ ಡಾ. ಪ್ರಭಾಕರ ಶೆಟ್ಟಿ ಅವರ ದೂರದೃಷ್ಟಿಯ ವ್ಯಕ್ತಿತ್ವದಿಂದ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕಾಗಿದ್ದು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಟ್ಟೂರಿನ ಕೀರ್ತಿಯನ್ನು ಪಸರಿಸುವಂತಹ ಮಹೋನ್ನತ ಯಯಜ್ಞವನ್ನು ನಡೆಸುವ ಮೂಲಕ ಕಾಪುವಿನ ಹೆಸರನ್ನು ಬಾನೆತ್ತರಕ್ಕೆ ಬಿತ್ತರಸಿದ ಧೀಮಂತರು. ಅವರ ಸೇವೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿ ಮತ್ತು ಟ್ರಸ್ಟಿಯವರಿಗೆ ನಾವೆಲ್ಲರೂ ಸಹಕಾರವನ್ನು ಮುಂದುವರೆಸೋಣ ಎಂದರು.
ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ದಂಡತೀರ್ಥ ವಿದ್ಯಾ ಸಂಸ್ಥೆಯು ೧೯೧೭ರಲ್ಲಿ ಕನ್ನಡ ಮಾಧ್ಯಮ ಶಾಲೆ, ೧೯೮೦ರಲ್ಲಿ ಆಂಗ್ಲ ವಿಭಾಗ ಪ್ರಾರಂಭಗೊಂಡು, ೧೯೯೯ರಲ್ಲಿ ವಿಜ್ಞಾನ ವಿಭಾಗದ ಮೂಲಕ ಪಿಯು ಕಾಲೇಜು ಪ್ರಾರಂಭಗೊಂಡಿತ್ತು. ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಮತ್ತಷ್ಟು ಬೆನ್ನೆಲುಬಾಗಿ ನಿಲ್ಲಬೇಕೆಂಬ ದೃಷ್ಟಿಕೋನ ಇರಿಸಿ ಈ ಸುಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಆರ್ಥಿಕ ಸಹಕಾರವನ್ನು ಪಡೆದು ರೂಪಾಯಿ ೧ ಕೋಟಿ ಸ್ಕಾಲರ್ ಶಿಪ್ ಫಂಡ್ ಸಂಗ್ರಹಿಸಿ ಈಗಾಗಲೇ ನೀಡುತ್ತಿರುವ ಶಿಕ್ಷಣ ಪ್ರೋತ್ಸಾಹವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕಿದೆ ಎಂಬ ಹಂಬಲವನ್ನು ವ್ಯಕ್ತಪಡಿಸಿದರು.
ನಿಟ್ಟೆ ವಿವಿಯ ಪ್ರೋ ಚಾನ್ಸಿಲರ್ ಡಾ. ಎಂ ಶಾಂತಾರಾಮ ಶೆಟ್ಟಿ ಹಾಗೂ ಮಣಿಪಾಲ ವಿವಿಯ ಪ್ರೋ ಚಾನ್ಸಿಲರ್ ಡಾ. ಎಚ್.ಎಸ್. ಬಲ್ಲಾಳ್ ಜಂಟಿಯಾಗಿ ಸಂಸ್ಥೆಯ ಸ್ಥಾಪಕ ಡಾ. ಕೆ ಪ್ರಭಾಕರ ಶೆಟ್ಟಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ರಜತಮಹೋತ್ಸವದ ಸ್ಮರಣ ಸಂಚಿಕೆ ರಜತಪ್ರಭವನ್ನು ಅನಿವಾಸಿ ಭಾರತೀಯ ಉದ್ಯಮಿ ಮಸ್ಕತ್ ದಿವಾಕರ್ ಶೆಟ್ಟಿ ಬಿಡುಗಡೆಗೊಳಿಸಿದರು.
೨೫ ವರ್ಷ ಸೇವೆ ಸಲ್ಲಿಸಿದ ಸಿಬಂದಿಗಳನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಹುಮಾನ ವಿತರಿಸಲಾಯಿತು.
ಎಸ್ ಕೆಜಿಎಸ್‌ಎಮ್ ಟ್ರಸ್ಟ್ ಅಧ್ಯಕ್ಷೆ ಶೋಭಾ ಪಿ.ಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ಡಾ. ಪನ್ನಾ ಪಿ. ಶೆಟ್ಟಿ, ತೃಷಾ ಪ್ರಶಾಂತ್ ಶೆಟ್ಟಿ, ಯು. ಮಾಧವ ಶೆಟ್ಟಿ, ಆರ್‌ಜಿಎಚ್‌ಯುಎಸ್ ಇದರ ನಿವೃತ್ತ ಉಪ ಕುಲಪತಿ ಡಾ. ಚಂದ್ರಶೇಖರ್ ಶೆಟ್ಟಿ, ಮಂಗಳೂರಿನ ಎ.ಜೆ. ಇನ್ಸ್ ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಸಂಸ್ಥೆಯ ಡೀನ್ ಡಾ. ಅಶೋಕ್ ಹೆಗ್ಡೆ, ಉಡುಪಿ ಜಿಲ್ಲಾ ಡಿ.ಡಿ.ಪಿ.ಯು ಮಾರುತಿ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕೆ. ವಾಸುದೇವ ಶೆಟ್ಟಿ, ಉಡುಪಿ ಸಾಯಿರಾಧಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಮಂಜುಳಾ ರಘುರಾಮ್ ವೇದಿಕೆಯಲ್ಲಿದ್ದರು.
ಸಂಸ್ಥೆಯ ಸಂಚಾಲಕ ಡಾ ಕೆ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಎಂ. ನೀಲಾನಂದ ನಾಯ್ಕ್ ವರದಿ ವಾಚಿಸಿದರು. ಆಡಳಿತಾಧಿಕಾರಿ ಅಲ್ಬನ್ ರೊಡ್ರಿಗಸ್ ರಜತ ಮಹೋತ್ಸವದ ವರದಿ ನೀಡಿದರು. ಕೆ. ವಿಶ್ವನಾಥ ಸ್ಮರಣ ಸಂಚಿಕೆ ವಿವರ ನೀಡಿದರು. ಉಪನ್ಯಾಸಕಿ ರೊಶಲ್ ಡಿ’ಸೋಜ ವಂದಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ಮತ್ತು ಉಪನ್ಯಾಸಕಿ ಉಷಾ ಮಾಬೆನ್ ನಿರೂಪಿಸಿದರು. ರೋಶಲ್ ಡಿಸೋಜಾ ವಂದಿಸಿದರು.