ನಾಪತ್ತೆಯಾಗಿದ್ದ ವ್ಯಕ್ತಿಯ ಕೊಳೆತ ಮೃತದೇಹ ಎಲ್ಲೂರು ಇರಂದಾಡಿ ಹಾಡಿಯಲ್ಲಿ ಪತ್ತೆ (A dead body was found in a decomposed in Yelluru, Irandadi)
ನಾಪತ್ತೆಯಾಗಿದ್ದ ವ್ಯಕ್ತಿಯ ಕೊಳೆತ ಮೃತದೇಹ ಎಲ್ಲೂರು ಇರಂದಾಡಿ ಹಾಡಿಯಲ್ಲಿ ಪತ್ತೆ
(PADUBIDRI) ಪಡುಬಿದ್ರಿ, ನ.11: ಕಟಪಾಡಿ ವಿಶ್ವನಾಥ ಕ್ಷೇತ್ರದ ಬಳಿಯ ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದ ಸುನೀಲ್ ಕುಮಾರ್(54)ಎಂಬವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಇರಂದಾಡಿ ಎಂಬಲ್ಲಿಯ ಹಾಡಿಯೊಂದರಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದೆ.
ಪ್ರಾಣಿಗಳು ಎಳೆದಾಡಿದ ರೀತಿ ಛಿದ್ರವಾಗಿದ್ದ ದೇಹದ ತಲೆಬುರುಡೆ ಮತ್ತು ಸೊಂಟದ ಭಾಗಗಳನ್ನು ಹೊಂದಿದ್ದ ಮೃತದೇಹವನ್ನು ಎಲ್ಲೂರು ಗ್ರಾ. ಪಂ. ಸದಸ್ಯ ಯಶವಂತ ಶೆಟ್ಟಿ ಅವರು ನೋಡಿದ್ದು, ಅಪರಿಚಿತ ಮೃತದೇಹ ಪತ್ತೆ ಕುರಿತಾಗಿ ಅವರು ಪಡುಬಿದ್ರಿ ಠಾಣೆಯಲ್ಲಿ ಭಾನುವಾರ ರಾತ್ರಿ ಈ ಕುರಿತಾದ ಪ್ರಕರಣವನ್ನು ದಾಖಲಿಸಿದ್ದರು.
ಮೃತದೇಹವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಂದಿರಿಸಿ ಸೋಮವಾರ ಸುನಿಲ್ ಕುಮಾರ್ ಮನೆಯವರು ಶವದ ಮೈಮೇಲಿದ್ದ ಬಟ್ಟೆಗಳ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ.
ಸುನಿಲ್ ಕುಮಾರ್ ರಿಕ್ಷಾ ಚಾಲಕರಾಗಿ ಬಳಿಕ ಫರ್ನಿಚರ್ ಮಳಿಗೆಯೊಂದರಲ್ಲಿಯೂ ದುಡಿದವರಾಗಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಮನೆಗೂ ಬಾರದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದರು. ಮಾನಸಿಕ ರೋಗಕ್ಕೂ ಚಿಕಿತ್ಸೆಗಳನ್ನು ನೀಡಲಾಗಿದ್ದರೂ ಪ್ರಯೋಜನವಾಗಿರಲಿಲ್ಲ.
ಮದ್ಯಪಾನದ ಚಟದಿಂದಾಗಿಯೇ ಇವರು ಮೃತಪಟ್ಟಿಬಹುದು ಎಂದು ಪೊಲೀಸ್ ಮೂಲಗಳು ಶಂಕಿಸಿವೆ.
ಸುನಿಲ್ ಕುಮಾರ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ಅಂಬುಲೆನ್ಸ್ ಚಾಲಕ, ನಾಗರಾಜ್ ಎಚ್ ಕೆರವರು ಪಡುಬಿದ್ರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸುವಲ್ಲಿ ಸಹಕರಿಸಿದ್ದರು.