ಎಲ್ಲೂರಿನಿಂದ ಕಾಸರಗೋಡಿಗೆ ಅದಾನಿ ವಿದ್ಯುತ್ ಸರಬರಾಜು ಕಾಮಗಾರಿಗೆ ವಿರೋಧ – ಕಾಮಗಾರಿ ಸ್ಥಗಿತ (Opposition to power suply work fron ADANI yelluru to Kasaragodu – Work stopped)
ಎಲ್ಲೂರಿನಿಂದ ಕಾಸರಗೋಡಿಗೆ ಅದಾನಿ ವಿದ್ಯುತ್ ಸರಬರಾಜು ಕಾಮಗಾರಿಗೆ ವಿರೋಧ – ಕಾಮಗಾರಿ ಸ್ಥಗಿತ
(Inna) ಇನ್ನಾ : ಎಲ್ಲೂರು -ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಟವರ್ ನಿರ್ಮಾಣಕ್ಕೆ ಖಾಸಗಿ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಘಟನೆ ಮಂಗಳವಾರ ಇನ್ನಾ ಗ್ರಾಮ ಪಂಚಾಯಿತಿಯ ಅಣ್ಣಾಜಿಗೋಳಿಯಲ್ಲಿ ನಡೆದಿದೆ.
ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಾಜಿಗೋಳಿಯ ಗಣಪತಿ ಹೆಗ್ಡೆ ಅವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ, ಜೆಸಿಬಿ ಯಂತ್ರದಲ್ಲಿ ಟವರ್ ನಿರ್ಮಾಣಕ್ಕೆ ಜೆಸಿಬಿ ಯಂತ್ರದ ಮೂಲಕ ಹೊಂಡ ಅಗೆಯಲಾಗುತಿತ್ತು. ಕಾಮಗಾರಿಯ ಸುದ್ದಿ ತಿಳಿಯುತಿದ್ದಂತೆಯೇ ಸ್ಥಳೀಯರು, ಟವರ್ ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳು, ರೈತ ಸಂಘದ ಮುಖಂಡರು ಸ್ಥಳಕ್ಕೆ ಜಮಾಯಿಸಿದರು.
ಇಲ್ಲಿನ ವಿದ್ಯುತ್ ಸರಬರಾಜು ಮಾಡಲು ಎಲ್ಲೂರು ಗ್ರಾಮದಲ್ಲಿರುವ ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯದ ಕಾಸರಗೋಡಿಗೆ 400 ಕೆವಿ ವಿದ್ಯುತ್ ಸರಬರಾಜಿಗೆ ಟವರ್ ನಿರ್ಮಾಣ ಕಾಮಗಾರಿಗೆ ಗುತ್ತಿಗೆಯನ್ನು ಪಡೆದಿರುವ ಸ್ಟಾರ್‌ಲೈಟ್ ಸಂಸ್ಥೆಯ ಕಾಮಗಾರಿಗೆ ಸ್ಥಳೀಯ ಜಮೀನುದಾರರ ವಿರೋಧ ವ್ಯಕ್ತವಾಗಿತ್ತು. ಹೋರಾಟದ ತೀವ್ರತೆ ಹೆಚ್ಚಾಗುತಿದ್ದಂತೆಯೇ ಕೆಲವು ತಿಂಗಳು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಯಾವುದೇ ಮುನ್ಸೂಚನೆ ನೀಡದೆ ಖಾಸಗಿ ಜಾಗದ ಮಾಲೀಕರಿಗೆ ನೋಟೀಸು ನೀಡದೆ ಕಾಮಗಾರಿಗೆ ಚಾಲನೆ ನೀಡಿರುವುದು ಭಾರೀ ವಿರೋಧಕ್ಕೆ ಕಾರಣವಾಯಿತು.
ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್., ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಯ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ವೇಳೆ ಅಧಿಕಾರಿಗಳನ್ನು ಹಾಗೂ ಕಂಪೆನಿಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳನ್ನು ಸ್ಥಳೀಯರು ಹಾಗೂ ಹೋರಾಟ ಸಮಿತಿ, ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಟವರ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಆರಂಭಿಸಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೆ ಹೊಂಡವನ್ನು ಮುಚ್ಚುವಂತೆ ಎಂದು ಸ್ಥಳೀಯರು ಪಟ್ಟುಹಿಡಿದರು. ವಿರೋಧ ತೀವ್ರವಾದ ಹಿನ್ನಲೆಯಲ್ಲಿ ಈ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ಐದು ದಿನಗಳ ಕಾಲಾವಕಾಶ ನೀಡಲಾಯಿತು. ಸ್ಥಳೀಯರ ಒತ್ತಡಕ್ಕೆ ಮಣಿದು ಕಂಪೆನಿಯವರು ಅಗೆದ ಹೊಂಡವನ್ನು ಮತ್ತೆ ಜೆಸಿಬಿಯಲ್ಲಿ ಮುಚ್ಚಿದರು.
ಉಡುಪಿ ಕಾಸರಗೋಡು ೪೦೦ ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ್ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ, ಜಯ ಎಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕುಶ ಆರ್ ಮೂಲ್ಯ, ರೇಶ್ಮಾ ಯು. ಶೆಟ್ಟಿ, ದೀಪಕ್ ಕಾಮತ್, ನಿತೇಶ್ ಪ್ರಸಾದ್ ಶೆಟ್ಟಿ, ಎಂ.ಪಿ. ಮೊಯಿದಿನಬ್ಬ, ಗಣಪತಿ ಹಡಗ್ಢ, ದಿನೇಶ್ ಕೋಟ್ಯಾನ್, ಮಾತ್ರ ಭೂಮಿ ಸಂರಕ್ಷಣಾ ಸಮಿತಿಯ ಅಲ್ಪೋನ್ಸ್ ಡಿಸೋಜ, ರೈತ ಸಂಘದ ಮನೋಹರ್ ಶೆಟ್ಟಿ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.