ಕಾರ್ಕಳ ಟಿಟಿಗೆ ಬೆಂಕಿ : ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಸಹಿತ 13 ಮಂದಿ ಪ್ರಯಾಣಿಕರು ಪವಾಡ ಸದೃಶ ಪಾರು (Karkala TT fire : 13 Passengers including President of Yenagude Shri Babbuswami Daivasthana have a miraculous escape)
ಕಾರ್ಕಳ ಟಿಟಿಗೆ ಬೆಂಕಿ : ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಸಹಿತ 13 ಮಂದಿ ಪ್ರಯಾಣಿಕರು ಪವಾಡ ಸದೃಶ ಪಾರು
(Katapady) ಕಟಪಾಡಿ : ಕುದುರೆಮುಖಕ್ಕೆ ಕಟಪಾಡಿಯಿಂದ 13 ಮಂದಿಯನ್ನು ಕರೆದೊಯ್ಯುತ್ತಿದ್ದ ಟೆಂಪೊ ಟ್ರಾವೆಲರ್ ಶನಿವಾರ ಕುದುರೆಮುಖ ಸಮೀಪ ಹೊತ್ತಿ ಉರಿದಿದ್ದು, ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್ ದಂಪತಿ ಸಹಿತ 13 ಮಂದಿ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾದ ಗಟನೆ ಘಟಸಿದೆ.
ಘಟನೆಯ ನಂತರ ಅಖಿಲೇಶ್ ಕೋಟ್ಯಾನ್ ಮಾಧ್ಯಮದೊಂದಿಗೆ ಮಾತನಾಡಿ, ನಾವೆಲ್ಲಾ ಕಣ್ಣೆದುರೇ ಹೊತ್ತಿ ಉರಿದ ಟೆಂಪೋವನ್ನು ಕಂಡು ಗಾಬರಿಗೊಂಡಿದ್ದೆವು. ನಾವೆಲ್ಲಾ ಬಬ್ಬುಸ್ವಾಮಿ ಕಾರಣಿಕದಿಂದ ಬದುಕಿ ಬಂದೆವು ಎಂದು ದೈವದ ಕಾರಣಿಕವನ್ನು ಕೊಂಡಾಡಿದ್ದಾರೆ.
ಎಲ್ಲರೂ ಕೆಳಗಿಳಿದು ನೋಡ ನೋಡುತ್ತಿದ್ದಂತೆ ಹೊಗೆಯೊಂದಿಗೆ ಬೆಂಕಿಯ ಕೆನ್ನಾಲಿಗೆ ಎದ್ದು, ಕೆಲವೇ ಕ್ಷಣದಲ್ಲಿ ಕಣ್ಣೆದುರೇ ಟೆಂಪೋ ಸುಟ್ಟು ಕರಕಲಾಯಿತು.
ಇದೊಂದು ಭಾರೀ ಅಪಾಯದ ಮುನ್ಸೂಚನೆಯಾಗಿತ್ತು. ಏಣಗುಡ್ಡೆ ಬಬ್ಬುಸ್ವಾಮಿ ಪ್ರೇರಣೆಯಿಂದ ಎಲ್ಲರನ್ನೂ ರಕ್ಷಿಸುವಂತಾಯಿತು. ಟೆಂಪೋ ದಲ್ಲಿದ್ದ ಏಳೆಂಟು ಕುಟುಂಬ ಕೂಡಾ ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ಭಕ್ತರಾಗಿದ್ದು, ನಮ್ಮನ್ನೆಲ್ಲಾ ಬಬ್ಬುಸ್ವಾಮಿ, ಕೊರಗಜ್ಜ ಪರಿವಾರ ಪವಾಡ ಸದೃಶವಾಗಿ ರಕ್ಷಿಸಿದ್ದಾರೆ ಎಂದೂ ಅಖಿಲೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಕಟಪಾಡಿಯಿಂದ ಪಿಕ್ ನಿಕ್ ತೆರಳಿದ್ದ ತಂಡದಲ್ಲಿ ಮಹಿಳೆಯರು ಪುರುಷರು ಸಹಿತ 13 ಮಂದಿ ಪ್ರಯಾಣ ಬೆಳೆಸಿದ್ದರು. ಪ್ರಯಾಣಿಸುತ್ತಿದ್ದಂತೆ ಶನಿವಾರ ಏಕಾಏಕಿ ಟೆಂಪೊ ಟ್ರಾವೆಲ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಬಬ್ಬುಸ್ವಾಮಿ ಭಕ್ತ ಅಖಿಲೇಶ್ ಕೋಟ್ಯಾನ್ ಅವರಿಗೆ ಏನೋ ಭಾರಿ ಅವಘಡ ನಡೆಯಲಿದೆ ಎಂದು ದೈವದ ಸೂಚನೆಯಾಗಿ ತಕ್ಷಣವೇ ಚಾಲಕನ ಬಳಿ ತೆರಳಿದರು.
ಟೆಂಪೋದಲ್ಲಿ ಸಣ್ಣ ಹೊಗೆ ಕಾಣಿಸಿಕೊಂಡ ತಕ್ಷಣ ಬಬ್ಬುಸ್ವಾಮಿಯ ಮೇಲೆ ಭಾರ ಹಾಕಿ, ಯಾರಿಗೂ ಏನನ್ನೂ ತಿಳಿಸದೆ ಕೂಡಲೇ ಎಲ್ಲರನ್ನೂ ರಸ್ತೆ ಮಧ್ಯೆ ಕೆಳಗೆ ಇಳಿಸಿದರು. ಡ್ರೈವರ್ ಹೊಗೆಯ ಬಗ್ಗೆ ಏನೂ ಇಲ್ಲ ಎಂಬಂತೆ ಹೇಳಿದರೂ, ಅಖಿಲೇಶ್ ಎಲ್ಲರನ್ನೂ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಮುಖಂಡ ಅಖಿಲೇಶ್ ಅವರ ಅಧ್ಯಕ್ಷತೆಯಲ್ಲಿ ಕಳೆದ 50 ವರ್ಷಗಳಿಂದ ಪಾಳು ಬಿದ್ದಿದ್ದ ಏಣಗುಡ್ಡೆ ಬಬ್ಬುಸ್ವಾಮಿಗೆ ಆಕರ್ಷಕ ಗುಡಿಯನ್ನು ಕಟ್ಟಿಸಲಾಗಿತ್ತು. 2 ವರ್ಷ ದ ಹಿಂದೆ ಪಾಂಗಾಳ ನಾಯಕ್ ಮನೆತನ ಹಾಗೂ ಊರವರ ಸಹಕಾರದೊಂದಿಗೆ ಗುಡಿ ನಿರ್ಮಿಸಿ ನೇಮೋತ್ಸವ ನಡೆದು, ಇದೀಗ 3ನೇ ವರ್ಷದ ನೇಮೋತ್ಸವದ ಸಿದ್ಧತೆಯಲ್ಲಿದ್ದರು.
ಪಾಳುಬಿದ್ದ ಬಬ್ಬುಸ್ವಾಮಿಗೆ ಗುಡಿ ಕಟ್ಟಿ ಪೂಜಿಸಿದ ಪ್ರತಿಫಲವಾಗಿ ಅನಾದಿ ಕಾಲದಿಂದಲೂ ನೆಲೆಯಾಗಿದ್ದ ಬಬ್ಬುಸ್ವಾಮಿ ಕಾರಣಿಕ ಮೆರೆದು, ನಮ್ಮನ್ನೆಲ್ಲಾ ರಕ್ಷಣೆ ಮಾಡಿದ್ದಾನೆ ಎಂದು ಟೆಂಪೋದಲ್ಲಿ ಪಾರಾದ ಪ್ರಯಾಣಿಕರು ದೈವದ ಕಾರಣಿಕವನ್ನು ಕೊಂಡಾಡಿದ್ದಾರೆ.