ಗೃಹರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟನೆ (Inauguration of Home Guards West Zone Level Professional Games)
ಗೃಹರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಉದ್ಘಾಟನೆ
(Udupi) ಉಡುಪಿ, ಡಿಸೆಂಬರ್ 16 : ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ಇವರ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಸೋಮವಾರ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು.
ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಬಲೂನು ಹಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ, ಕ್ರೀಡೆಯಿಂದ ಭಾಂದವ್ಯ ವೃದ್ಧಿಸುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಗೆಲುವಿಗಿಂತ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆಯು ಅತಿ ಮುಖ್ಯವಾಗಿರುತ್ತದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೃಹರಕ್ಷಕರ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸಲು ಇಂತಹ ಕ್ರೀಡಾಕೂಟಗಳ ಆಯೋಜನೆ ಸಹಕಾರಿ. ಗೃಹ ರಕ್ಷಕ ದಳವು ಪೊಲೀಸ್ ಪಡೆಯ ಮತ್ತೊಂದು ಪ್ರಮುಖ ವಿಭಾಗವಾಗಿದೆ. ಗೃಹ ರಕ್ಷಕ ದಳದವರು ಶಿಸ್ತು, ತಾಳ್ಮೆ ಹಾಗೂ ಬದ್ಧತೆಗೆ ಹೆಸರಾಗಿದ್ದಾರೆ. ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಗೃಹ ರಕ್ಷಕರು ಆರೋಗ್ಯವಂತರಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದರು.
ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಕ್ರೀಡಾಂಗಣಕ್ಕೆ ಸಂದೀಪ್ ಎಚ್. ಜಿ ಕ್ರೀಡಾಜ್ಯೋತಿ ತಂದರು. ಕ್ರೀಡಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಪ್ರಶಾಂತ ಕುಮಾರ್ ಶೆಟ್ಟಿ, ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್, ಗೃಹ ರಕ್ಷಕ ಕಚೇರಿಯ ಅಧೀಕ್ಷಕರು, ಸಿಬ್ಬಂದಿಗಳು, ಘಟಕಾಧಿಕಾರಿಗಳು, ಪುರುಷ ಹಾಗೂ ಮಹಿಳಾ ಗೃಹರಕ್ಷಕರು ಉಪಸ್ಥಿತರಿದ್ದರು.
ಗೃಹ ರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಸ್ವಾಗತಿಸಿದರು. ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಲೂಯಿಸ್ ನಿರೂಪಿಸಿದರು. ಸಹಾಯಕ ಬೋಧಕ ಕರಿಬಸಪ್ಪ ವಂದಿಸಿದರು.