ಡಿ. 14 ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್‌ರವರಿಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ (A Felicitation program for International magic artist Prof. Shankar at Udupi on 14TH DEC.)
ಡಿ. 14 ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್‌ರವರಿಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ
(Udupi) ಉಡುಪಿ: ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಪ್ರೊಫೆಸರ್ ಶಂಕರ್ ಅಭಿನಂದನಾ ಸಮಿತಿ ಉಡುಪಿ ಆಯೋಜಿಸಿದ್ದು, ಡಿಸೆಂಬರ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ 8:30ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ನೆರವೇರಿಸಲಿದ್ದಾರೆ.
ಕ್ರಾರ್ಯಕ್ರಮದಲ್ಲಿ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ಮುಂಬೈಯ ತೋನ್ಸೆ ಜಯಕೃಷ್ಣ ಶೆಟ್ಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಉಪಸ್ಥಿತರಿರುತ್ತಾರೆ.
ವಿದುಷಿ ಮಂಜರಿಚಂದ್ರ ಅವರ ಶಿಷ್ಯರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ ನೆರವೇರಲಿದೆ.
ಪ್ರೊಫೆಸರ್ ಶಂಕರ್ ಅವರ ಜಾದೂ ಜಗತ್ತು ವಿಡಿಯೋ ತುಣುಕುಗಳು ಅನಾವರಣಗೊಳ್ಳಲಿದೆ. ಪ್ರೊಫೆಸರ್ ಶಂಕರ್ ಅವರ ಕುರಿತಾದ ಪ. ರಾಮಕೃಷ್ಣ ಶಾಸ್ತ್ರಿ ಅವರು ರಚಿಸಿದ ಪುಸ್ತಕವನ್ನು ನಾಡೋಜ ಪ್ರೊ. ಕೆ. ಪಿ. ರಾವ್ ಅವರು ಲೋಕಾರ್ಪಣೆ ಗೊಳಿಸಲಿದ್ದಾರೆ. ಸಭೆಯಲ್ಲಿ ಯಕ್ಷಗಾನ ಅಕಾಡೆಮಿಯ ಪೂವಾ೯ಧ್ಯಕ್ಷರಾದ ಪ್ರೊ. ಎಂ. ಎಲ್. ಸಾಮಗ, ಪ್ರಕಾಶಕರಾದ ಪ್ರಕಾಶ್ ಕೊಡಂಕೇರಿ ಉಪಸ್ಥಿತರಿರುತ್ತಾರೆ.
ಸಂಜೆ 5:30 ರಿಂದ ಪ್ರೊಫೆಸರ್ ಶಂಕರ್ ಅವರ ಬಗ್ಗೆ ತೇಜಸ್ವಿ ಶಂಕರ್ ಅವರು ಮಾತನಾಡಲಿದ್ದಾರೆ. ಸಂಜೆ 5:45 ರಿಂದ ಪ್ರೊಫೆಸರ್ ಶಂಕರ್ ಅವರ ಒಡನಾಡಿಗಳಾದ ಡಾ. ಕಿರಣ್ ಆಚಾರ್ಯ, ಲಿಯಾಕತ್ ಅಲಿ, ಮೂರ್ತಿ ದೇರಾಜೆ, ರಾಜ ಯೋಗಿನಿ ಬಿ.ಕೆ. ಸೌರಭ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದು, ಆಸ್ಟ್ರೋ ಮೋಹನ್ ಅವರು ಸಮನ್ವಯಕಾರಾಗಿರುತ್ತಾರೆ.
6.20 ರಿಂದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ವಿನಯ್ ಹೆಗಡೆಯವರಿಂದ ‘ಗಾಳಿಯಲ್ಲಿ ಚಿತ್ತಾರ’ ಎನ್ನುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸಂಜೆ 7.10 ರಿಂದ ಪ್ರೊಫೆಸರ್ ಶಂಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಇದರ ಸ್ವಾಮೀಜಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಖ್ಯಾತ ವಾಗ್ಮಿ ಹಾಗೂ ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋರೋಗ ತಜ್ಞ ಡಾ. ಪಿ .ವಿ ಭಂಡಾರಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ ಗಂಗಾಧರ್ ರಾವ್, ಸಾಫಲ್ಯ ಟ್ರಸ್ಟ್ ನಿರ್ದೇಶಕಿ ನಿರೂಪಮ ಪ್ರಸಾದ್ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ನಂತರ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳು ಪ್ರೊಫೆಸರ್ ಶಂಕರ್ ಅವರನ್ನು ಗೌರವಿಸಲು ಅವಕಾಶವಿದೆ ಎಂದು ಪ್ರೊಫೆಸರ್ ಶಂಕರ್ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದಾರೆ.
ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಚಾಲಕ ರವಿರಾಜ್ ಹೆಚ್.ಪಿ ಉಪಾಧ್ಯಕ್ಷರಾದ ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು.
ಪ್ರೊ. ಶಂಕರ್ ಅವರ ಬಗ್ಗೆ
ಪ್ರೊ. ಶಂಕರ್ ಜಗತ್ತಿನ ಜನರನ್ನೆಲ್ಲ ತನ್ನ ಅದ್ಭುತ ಜಾದೂ ವಿದ್ಯೆಯಿಂದ ಮೋಡಿ ಮಾಡಿದ ಅದ್ವಿತೀಯ ಜಾದೂ ಗಾರುಡಿಗ. ರಜತಪೀಠಪುರ ಉಡುಪಿಯ ಕೀರ್ತಿ ಪದಕ. ಗಿಲಿ ಗಿಲಿ ಮ್ಯಾಜಿಕ್ ತಂಡ ಕಟ್ಟಿದ ಜಾದೂ ಕೌತುಕ.
ಪ್ರೊಫೆಸರ್ ಶಂಕರ್ ಎಂಬ ಅನರ್ಘ್ಯ ರತ್ನ ನಮ್ಮೂರಿನವರು ಎಂಬ ಹೆಮ್ಮೆ ನಮ್ಮದು. 60ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ತೀರ ಅಪರಿಚಿತವಾದ ಜಾದೂ ಕಲೆಯನ್ನು ಅಭ್ಯಸಿಸಿ, ಆ ಕಲೆಗೆ ವಿಶ್ವ ಮಾನ್ಯತೆಯನ್ನು ದೊರಕಿಸಿಕೊಟ್ಟವರು. ಅಪರೂಪದ ಕಲಾ ಪ್ರಕಾರಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟವರು ಪ್ರೊ. ಶಂಕರ್. ಆಧುನಿಕ ಇಂದ್ರಜಾಲ ವಿದ್ಯೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಿದ ಮೊದಲ ಜಾದೂ ಮಾಂತ್ರಿಕ ನಮ್ಮ ಪ್ರೊ. ಶಂಕರ್ ಅವರು.
ಕರ್ನಾಟಕ ಗಡಿ ಪ್ರದೇಶ ಕಾಸರಗೋಡು ಬದಿಯಡ್ಕ ಸಮೀಪದ ಶಿಮ್ಲಡ್ಕ ಶಂಭಟ್ಟರು ಹಾಗೂ ಪರಮೇಶ್ವರಿ ದಂಪತಿಗಳ ಚತುರ್ಥ ಪುತ್ರರಾದ ಶ್ರೀ ಶಂಕರನಾರಾಯಣ ಭಟ್ಟರು, ಇಂದು ಪ್ರೊ. ಶಂಕರ್ ಎಂದೇ ಖ್ಯಾತರಾದವರು.
ಸಾಹಸೀ ತಂದೆ, ಸಾಧ್ವಿ ತಾಯಿ, ನಾಲ್ಕು ಜನ ಅಣ್ಣಂದಿರು, ಐದು ಜನ ಅಕ್ಕಂದಿರು ಹಾಗೂ ಒಬ್ಬಳು ತಂಗಿಯರ ಮಧ್ಯೆ ತುಂಬು ಕುಟುಂಬದಲ್ಲಿ ಬೆಳೆದವರು.
ಆ ಕಾಲದಲ್ಲಿ ಶಂಕರ್ ರವರ ತಂದೆ ಶಂಭಟ್ಟರು ಬೆಳ್ತಂಗಡಿ ಸಮೀಪದ ಮಲ್ಲೊಟ್ಟು ನಲ್ಲಿ ಖಾಲಿ ಜಾಗವನ್ನು ಖರೀದಿಸಿ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಿ ಅದ್ಭುತವಾದ ಕೃಷಿಯ ಮೂಲಕ ಜೀವನಪಯಣ ಮುಂದುವರೆಸಿದವರು. ಶಂಕರನಾರಾಯಣ ಭಟ್ಟ ಉರುಫ್ ಪ್ರೊ. ಶಂಕರ್ ರವರ ಮೊದಲ ವಿದ್ಯಾಭ್ಯಾಸ ಸಮೀಪದ ಗೇರುಕಟ್ಟೆ ಶಾಲೆಯಲ್ಲಿ, ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸ ಬೆಳ್ತಂಗಡಿಯಲ್ಲಿ, ಪದವಿ ಪೂರ್ವ ಶಿಕ್ಷಣ ಉಜಿರೆಯಲ್ಲಿ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದವರು. ಮನಃ ಶಾಸ್ತ್ರ ಪದವಿ ಪಡೆಯುವುದರೊಂದಿಗೆ ಹಿಪ್ನೋಟಿಸಂ ವಿದ್ಯೆಯಲ್ಲಿ ಪರಿಣತಿ ಸಾಧಿಸಿದವರು.
ಸ್ವಭಾವತಃ ಕುತೂಹಲಿಯೂ ಸಾಹಸಿಯೂ ಆಗಿದ್ದ ಶಂಕರ್ ಅವರು ಬಾಲ್ಯದಲ್ಲಿ ಪ್ರತಿಯೊಂದು ವಿಷಯದಲ್ಲೂ ವಿಶೇಷ ಆಸಕ್ತಿ ಹೊಂದಿದ್ದು, ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಚಿಕ್ಕಂದಿನಿಂದಲೂ ದೊಂಬರಾಟದ ಜಾದೂ ಆಟಗಳನ್ನು ನೋಡಿ, ಜಾದೂ ವಿದ್ಯೆಯ ಬಗ್ಗೆ ಆಸಕ್ತಿ ಹೆಚ್ಚಿ ಕ್ರಮೇಣ ಜಾದೂ ಒಂದೇ ಅವರ ಮಂತ್ರವಾಯಿತು.
ಪ್ರೌಢಶಾಲಾ ದಿನಗಳಲ್ಲೇ ಶಂಕರ್ ರವರು ಚಿಕ್ಕ ಚಿಕ್ಕ ಜಾದೂ ಕಾರ್ಯಕ್ರಮ ನೀಡಲು ಆರಂಭಿಸಿದರು. ಯಾರಿಂದಲೂ ಜಾದೂ ವಿದ್ಯೆಯನ್ನು ಕಲಿಯದೇ, ಗುರುಗಳ ಮಾರ್ಗದರ್ಶನ, ಸಹಕಾರವಿಲ್ಲದೆ, ಯಾರಿಂದಲೂ ಆರ್ಥಿಕ ಸಹಾಯವನ್ನು ಕೂಡಾ ಪಡೆಯದೆ ತನ್ನದೇ ಸಾಮರ್ಥ್ಯ, ಸತತ ಪರಿಶ್ರಮ, ವಿಪರೀತ ಕುತೂಹಲ ಹಾಗೂ ಅನನ್ಯ ಶ್ರದ್ಧೆಯಿಂದ ಅವರ ಜಾದೂ ಜಗತ್ತಿನ ಪಯಣ ಆರಂಭವಾಯಿತು.
ಮಂಗಳೂರಿನಲ್ಲಿ ನಡೆದ ಪ್ರಸಿದ್ಧ ಜಾದೂಗಾರ ಕೆ. ಲಾಲ್ ರವರ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿ, ಜಾದೂ ರಹಸ್ಯಗಳನ್ನು ತಿಳಿದುಕೊಂಡು, ತನ್ನದೇ ಯೋಜನೆ, ಯೋಚನೆ, ಪರಿಕಲ್ಪನೆಯ ಜಾದೂ ಪ್ರದರ್ಶನಕ್ಕೆ ನಾಂದಿ ಹಾಡಿದರು.
ತಮ್ಮ ಹದಿನಾಲ್ಕರ ಕಿಶೋರ ಪ್ರಾಯದಲ್ಲಿ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಕೋವಿಯಿಂದ ಹೊಡೆದ ಸಜೀವ ಗುಂಡನ್ನು ಅಂಗೈಯಲ್ಲಿ ಹಿಡಿಯುವ ಅಪರೂಪದ ಜಾದೂ ಪ್ರದರ್ಶಿಸಿದ್ದೆ ಅಲ್ಲದೆ, ಅತಿ ಅಪಾಯಕಾರಿಯಾದ ಜೀವಂತ ಸಮಾಧಿ ಜಾದೂ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದು ಇದೀಗ ಇತಿಹಾಸ.
ಪದವಿ ಪೂರ್ವ ವ್ಯಾಸಂಗ ಮಾಡುತ್ತಿರುವಾಗ ಕಲ್ಕತ್ತಾ ಜಾದೂ ಪ್ರತಿಷ್ಠಾನದಿಂದ ಪ್ರೊಫೆಸರ್ ಪದವಿ ಮುಡಿಗೇರಿಸಿಕೊಂಡ ಪ್ರೊ. ಶಂಕರ್ ರವರು ಆ ಕಾಲದ ಜಾದೂ ದಿಗ್ಗಜರಿಂದ “ಬುಲೆಟ್ ಪ್ರೂಫ್ ಮೆಜೀಷಿಯನ್” ಪ್ರಶಸ್ತಿ ಪಡೆದು ಖ್ಯಾತರಾದವರು. 1974ರಲ್ಲಿ ಕೆ ಕೆ ಪೈಯವರ ಶಿಫಾರಸಿನೊಂದಿಗೆ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿಜೀವನ ಆರಂಭಿಸಿದ ಇವರು 1974 ರಿಂದ 2001 ರವರೆಗೆ “ಇಂಡಸ್ಟ್ರಿಯಲ್ ಮೆಜೀಶಿಯನ್ “ಎಂಬ ಹುದ್ದೆಯೊಂದಿಗೆ ದೇಶದಾದ್ಯಂತ ಪ್ರಮುಖವಾಗಿ ಉತ್ತರ ಭಾರತದ ಹಳ್ಳಿ ಹಳ್ಳಿಗಳಲ್ಲಿ ಬ್ಯಾಂಕಿನ ಸೇವಾ ಯೋಜನೆಗಳನ್ನು ಜಾದೂ ಮೂಲಕ ಅವಿರತವಾಗಿ ಜನಸಾಮಾನ್ಯರಿಗೆ ತಲುಪಿಸಿದ ವಿಶ್ವದ ಏಕೈಕ ಜಾದೂಗಾರ ಪ್ರೊ. ಶಂಕರ್ ಎಂಬ ಮನ್ನಣೆಗೆ ಪಾತ್ರರಾದವರು. ಈ ರೀತಿ ಸಿಂಡಿಕೇಟ್ ಬ್ಯಾಂಕ್ ಒಬ್ಬ ಜಾದೂಗಾರನನ್ನು ತನ್ನ ಜನೋಪಯೋಗಿ ಸೇವಾ ಯೋಜನೆಗಳ ಪ್ರಚಾರಕ್ಕಾಗಿ ಬಳಸಿಕೊಂಡ ಏಕೈಕ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಯಿತು.
ಉಡುಪಿಯಲ್ಲಿ ಮೂರು ಬಾರಿ ಗಿಲಿ ಗಿಲಿ 94 , ಗಿಲಿ ಗಿಲಿ 97, ಗಿಲಿ ಗಿಲಿ 2001 ಎಂಬ ಜಾಗತಿಕ ಜಾದೂ ಸಮ್ಮೇಳನಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಏರ್ಪಡಿಸಿ ಜಗತ್ತಿನ ಪ್ರಸಿದ್ಧ ಜಾದೂಗಾರರನ್ನು ಕರೆಯಿಸಿ ಅವರ ಜಾದೂ ವಿಶೇಷತೆಗಳನ್ನು ಜನರಿಗೆ ಪರಿಚಯಿಸಿದ ಹೆಚ್ಚುಗಾರಿಕೆ ಇವರದು. ಈ ಸಮ್ಮೇಳನಗಳ ಸಂದರ್ಭದಲ್ಲಿ ಅಳಿದು ಹೋಗುತ್ತಿರುವ ದೇಶವಿದೇಶಗಳ ಬೀದಿ ಬದಿಯ ಜಾದೂಗಾರರನ್ನು ಕರೆಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗೊಂದು ಉತ್ತಮ ವೇದಿಕೆ ನಿರ್ಮಾಣ ಮಾಡಿಕೊಟ್ಟ ಜಾದೂ ಸಂತ ಪ್ರೊಫೆಸರ್ ಶಂಕರ್ ರವರು.
ಕೇವಲ ದಂತ ಕಥೆ ಎಂದೇ ಬಿಂಬಿತವಾಗಿದ್ದ ಭಾರತದ ಸಾಂಪ್ರದಾಯಿಕ ಜಾದೂವಾದ The Great Indian Rope Trick ನ್ನು ಗಿಲಿ ಗಿಲಿ ಸಮ್ಮೇಳನದ ಮೂಲಕ ಪರಿಚಯಿಸಿದ ಹಿರಿಮೆ ಇವರದ್ದು.
ಇವರ ಈ ಅಪ್ರತಿಮ ಸಾಹಸವನ್ನು ಮೆಚ್ಚಿ ಹೆಸರಾಂತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು ಶಂಕರ್ ರವರ ಶಿರಕ್ಕೆ ಮೈಸೂರು ಪೇಟ ತೊಡಿಸಿ ಗೌರವಿಸಿದ್ದೇ ಅಲ್ಲದೆ, ಯಾವುದೇ ಸಮಿತಿಗಳನ್ನು ರಚಿಸದೆ ಕೇವಲ ಮನೆಯವರು ಮತ್ತು ಗೆಳೆಯರ ಸಹಾಯದಿಂದ ಜಾಗತಿಕ ಸಮ್ಮೇಳನವನ್ನು ಏರ್ಪಡಿಸಿದ್ದು ನಾನು ಕಂಡಂತೆ ಶಂಕರ್ ಮಾತ್ರ ಎಂದು ಮುಕ್ತವಾಗಿ ಪ್ರಶಂಸಿಸಿದ್ದರು.
ಮೂರನೇ ಜಾಗತಿಕ ಜಾದೂ ಸಮ್ಮೇಳನಕ್ಕೆ ಇಡೀ ಭಾರತದಲ್ಲಿ ಎಲ್ಲೂ ಪ್ರದರ್ಶನಕ್ಕೆ ಒಪ್ಪದ ಜಗತ್ತಿನ ಶ್ರೇಷ್ಠ ಎಸ್ಕೇಪ್ ಏಕ್ಟ್ ಜಾದೂಗಾರ ಡೀನ್ ಗನರ್ ಸನ್ ಅವರು ಉಡುಪಿಗೆ ಆಗಮಿಸಿದ್ದರು. ಆಗ ಅವರು ಯಾವುದೇ ಸ್ಟಾರ್ ಹೋಟೆಲ್ ಗಳಲ್ಲಿ ಉಳಿದುಕೊಳ್ಳದೆ ತಮ್ಮ ಗೆಳೆಯರೇ ಹೇಳಿದ “ನೀನು ಪ್ರದರ್ಶನ ನೀಡದೇ ಇದ್ದರೂ ಸರಿಯೇ, ಶಂಕರ್ ಅವರ ಆತಿಥ್ಯವನ್ನು ಸವಿಯುವುದಕ್ಕಾದರೂ ಉಡುಪಿಗೆ ಹೋಗಬೇಕು” ಎಂಬ ತನ್ನ ಅನೇಕ ಜಾದು ಗೆಳೆಯರು ಹೇಳಿದ್ದರಿಂದ ಉಡುಪಿಗೆ ಬಂದೆ ಎಂದು ಹೇಳಿದ್ದೇ ಅಲ್ಲದೆ, ಸ್ಟಾರ್ ಹೋಟೆಲ್ ಗಳನ್ನು ಬಿಟ್ಟು ಶಂಕರ್ ಅವರ ಮನೆಯಲ್ಲೇ ತಂಗಿದ್ದರು.
ಜಾದುವನ್ನು ಕೇವಲ ಮನೋರಂಜನೆಗೆ ಮಾತ್ರ ಬಳಸಿಕೊಳ್ಳದೆ ಮಾಟ, ಮಂತ್ರ, ಪವಾಡ, ಮೂಡನಂಬಿಕೆಗಳು ಬ್ಲಾಕ್ ಮ್ಯಾಜಿಕ್ ನಂತಹ ಅಂಧ ಶ್ರದ್ಧೆಗಳ ವಿರುದ್ಧ ಸತತವಾಗಿ ಹೋರಾಡುತ್ತಾ ನಾನಾ ರೀತಿಯ ಕಪಟಿಗಳ ಮೋಸಗಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಪ್ರದರ್ಶನ ನೀಡಿದ ಮೊತ್ತ ಮೊದಲ ಜಾದುಗಾರ ಎಂಬ ಅಂಕಿತವನ್ನು ಪಡೆದವರು ಪ್ರೊ. ಶಂಕರ್.
2011ರಲ್ಲಿ ತಮ್ಮ 60ನೇ ವರ್ಷದ ಸಂಭ್ರಮವನ್ನು ಅಕ್ಷಯ ವಸಂತ ಎಂಬ ಶೀರ್ಷಿಕೆಯಲ್ಲಿ ಜನ ಜಾಗೃತಿಗಾಗಿ ಜಾದೂವನ್ನು ನಾಡಿನಾದ್ಯಂತ ಸ್ವಂತ ಖರ್ಚಿನಲ್ಲಿ ವರ್ಷವಿಡಿ ಉಚಿತವಾಗಿ ಪ್ರದರ್ಶನ ನೀಡುವ ಮೂಲಕ ತಮ್ಮ ಷಷ್ಟ್ಯಬ್ಧವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಆದರ್ಶ ಜಾದೂಗಾರ ಪ್ರೊ. ಶಂಕರ್.
ಈಗಲೂ ಆಸಕ್ತಿ ಅಪೇಕ್ಷೆ ಇದ್ದು, ಕೇಳಿ ಬರುವ ಸಂಘಟಕರಿಗೆ ಹೊರೆಯಾಗದಂತೆ ಪ್ರದರ್ಶನದ ಖರ್ಚು ವೆಚ್ಚಗಳನ್ನು ಮಾತ್ರ ಸ್ವೀಕರಿಸಿ ಜನ ಜಾಗೃತಿ ಪ್ರದರ್ಶನವನ್ನು ನೀಡುತ್ತಾ ಬಂದಿದ್ದು, ಸಂಘಟಕರು ಸ್ವ ಇಚ್ಛೆಯಿಂದ ನೀಡುವ ಸಂಭಾವನೆಯನ್ನು ವಿನೀತ ಭಾವದಿಂದ ಸ್ವೀಕರಿಸಿ ಆ ಮೊತ್ತವನ್ನು ಜನ ಜಾಗೃತಿಗಾಗಿಯೇ ಬಳಸುವ ವಿಶಿಷ್ಟ ವ್ಯಕ್ತಿ ಜಾದೂಗಾರ ಪ್ರೊ. ಶಂಕರ್.
ಪ್ರೊ. ಶಂಕರ್ ರವರು ಜಗದ ಕಣ್ಣು ತೆರೆಸಲು ಕಣ್ಣಿಗೆ ಬಟ್ಟೆ ಕಟ್ಟಿ 1995 ರಲ್ಲಿ ಜಾಗೃತಿ – 95 ಎಂಬ ಶಿರೋನಾಮೆಯಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ದ್ವಿಚಕ್ರ ವಾಹನದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಸವಾರಿ ಮಾಡಿದ ವಿಶಿಷ್ಟ ಜಾಥಾ ಜನಮಾನಸದಲ್ಲಿ ಇಂದೂ ಹಸಿರಾಗಿದೆ. ಆದಿನಗಳ ತನ್ನ ಒಡನಾಡಿಗಳಾಗಿದ್ದ ಆಸ್ಟ್ರೋ ಮೋಹನ್, ಪ್ರಹ್ಲಾದ್ ಆಚಾರ್ಯ ರವರೊಂದಿಗೆ ಪ್ರೊ. ಶಂಕರ್ ನಡೆಸಿದ 350 ಕಿಲೋ ಮೀಟರ್ ಗಳ ಈ ಜಾಗ್ರತಿಗಾಗಿ ಜಾಥಾ ಸಂಚಲನವನ್ನೇ ಸೃಷ್ಟಿ ಸಿತ್ತು.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗಾಗಿ ಜಾದೂ ಕೈಚಳಕಗಳನ್ನು ಪ್ರದರ್ಶಿಸಿ, ರೋಗಿಗಳು ಆ ಜಾದೂಗಳನ್ನು ಕಲಿತು, ಅನುಭವಿಸಿ, ಆನಂದಿಸಿ ದೈಹಿಕವಾಗಿ, ಮಾನಸಿಕವಾಗಿ ಖಾಯಿಲೆಯಿಂದ ಮುಕ್ತರಾಗುವಂತಹ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದ ಜಾದೂ ವೈದ್ಯ ನಮ್ಮ ಪ್ರೊ. ಶಂಕರ್ ರವರು.
ಆಧ್ಯಾತ್ಮ ಪ್ರಸಾರಕ್ಕಾಗಿ ಇವರು ಕೈಗೆತ್ತಿಗೊಂಡ ಮಹತ್ತರ ಹೆಜ್ಜೆ ಉಲ್ಲೇಖನೀಯ. ವಿಶ್ವದಲ್ಲೇ ಮೊದಲ ಬಾರಿಗೆ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದವರ ವಿನಂತಿಯ ಮೇರೆಗೆ ಅವರ ಆಧ್ಯಾತ್ಮಿಕ ನಿಲುವುಗಳನ್ನು ಜನರಿಗೆ ತಲುಪಿಸಿ ಆಧ್ಯಾತ್ಮದತ್ತ ಜನರ ಒಲವನ್ನು ಹೆಚ್ಚಿಸಲು ಆಧ್ಯಾತ್ಮಿಕ ಜಾದೂ ಎಂಬ ವಿಶೇಷ ಕಾರ್ಯಕ್ರಮವನ್ನು ನಾಡಿನಲ್ಲೆಡೆ ನಡೆಸುತ್ತಾ, ದೆಹಲಿಯ ತಿಹಾರ್ ಜೈಲಿನಲ್ಲೂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿದ ಆಧ್ಯಾತ್ಮಿಕ ಜಾದೂ ಹರಿಕಾರ ಇವರು.
ತಮ್ಮ ತಂಡಕ್ಕಾಗಿ ಒಂದು ಮಿನಿ ಬಸ್ ಹಾಗೂ ಇಡೀ ರಂಗ ವೇದಿಕೆಯನ್ನು ಸಾಗಿಸಲು ಒಂದು ಟ್ರಕ್ ಗಳ ಜೊತೆ ದೇಶದ ಉದ್ದಗಲಕ್ಕೂ ಸಂಚರಿಸಿ ಇಂದ್ರಜಾಲ ಪ್ರದರ್ಶನದ ಮೂಲಕ ಸಂಚಲನ ಮೂಡಿಸಿದ ಇವರು ನಾಟಕದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಬೃಹತ್ ಟಿವಿ ಪರದೆಗಳ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಿ ಅಪಾರ ಜನ ಮೆಚ್ಚುಗೆಯನ್ನು ಗಳಿಸಿದ್ದು ಜನಜನಿತ. ಪ್ರತೀ ಕಾರ್ಯಕ್ರಮದಲ್ಲೂ ಸೇರಿದ ಕನಿಷ್ಠ ಐದು ಸಾವಿರದಿಂದ ಹತ್ತು ಸಾವಿರ ಜನರು ಇದರ ಪ್ರಯೋಜನ ಪಡೆದದ್ದು ವಿಶೇಷ.
ದೇಶದ ಪಾಕಿಸ್ತಾನ ಮತ್ತು ಚೈನಾ ಗಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗಾಗಿ ವಿನೂತನ ಕಾರ್ಯಕ್ರಮಗಳನ್ನು ನೀಡಿದ್ದೇ ಅಲ್ಲದೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಾರ್ಗಿಲ್ ಜಾದೂ ಎಂಬ ಪರಿಕಲ್ಪನೆ ಯೊಂದಿಗೆ ಪ್ರದರ್ಶನ ನಡೆಸಿ ಆ ಪ್ರದರ್ಶನದಿಂದ ಸಂಗ್ರಹವಾದ ಹಣವನ್ನು ಕಾರ್ಗಿಲ್ ಯೋಧರ ನಿಧಿಗೆ ಸಮರ್ಪಿಸಿ ದೇಶಪ್ರೇಮ ಮೆರೆದ ಅಪ್ಪಟ ದೇಶಪ್ರೇಮಿ ಇವರು.
ವಿಶೇಷವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರ ವಿನಂತಿಯ ಮೇರೆಗೆ ಅವರು ನಡೆಸುತ್ತಿರುವ ಮದ್ಯ ವರ್ಜನ ಶಿಬಿರದಲ್ಲಿ ಶಂಕರ್ ಅವರು ನಿರಂತರವಾಗಿ ಭಾಗವಹಿಸಿ ಬೀಡಿ, ಸಿಗರೇಟ್, ಮದ್ಯ ಸೇವನೆ, ಮಾದಕ ದ್ರವ್ಯ ವ್ಯಸನಿಗಳ ಮನಃ ಪರಿವರ್ತನೆಗೆ ತಮ್ಮ ಜಾದೂ ವಿದ್ಯೆಯನ್ನು ಬಳಸಿ ಸಾವಿರಾರು ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿಸಿದ್ದಾರೆ. ಇಂದಿಗೂ ಈ ಒಂದು ಸಮಾಜಮುಖಿ ಕೆಲಸ ಸದ್ದಿಲ್ಲದೆ ನಡೆಯುತ್ತಲೇ ಇದ್ದು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ನಿರಂತರ ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ವಿಶ್ವದ ಏಕೈಕ ಸಾಮಾಜಿಕ ಪರಿವ್ರಾಜಕ ಜಾದುಗಾರ ಪ್ರೊ ಶಂಕರ್. ಇವರೊಳಗೊಬ್ಬ ಅತ್ಯುತ್ತಮ ನಟ, ನಾಟಕ ನಿರ್ದೇಶಕ,, ಉತ್ತಮ ಏನ್ ಸಿ ಸಿ ಕೆಡೆಟ್, ಚಿತ್ರ ಕಲಾವಿದ, ಕವಿ ,ಕಥೆಗಾರನಿದ್ದಾನೆ.
ಎಂಟನೇ ತರಗತಿಯಲ್ಲಿರುವಾಗಲೇ ” ಬೆನ್ನು ಬಿಡದ ಬೇತಾಳ” ಎನ್ನುವ ಕಾದಂಬರಿಯನ್ನು ಬರೆದು ಪ್ರಕಟಿಸಿದ್ದ ಇವರು, ಒಳ್ಳೆಯ ಯಕ್ಷಗಾನ ವೇಷಧಾರಿ ಆಗಿದ್ದೇ ಅಲ್ಲದೆ ತಾಳಮದ್ದಳೆಯಲ್ಲಿ ಉಡುವೇಕೋಡಿ ಸುಬ್ಬಪ್ಪಯ್ಯನವರ ಜೊತೆ ತಾರೆಯಾಗಿ ಅರ್ಥಧಾರಿಯಾಗಿ ಭಾಗವಹಿಸಿದ್ದರು.
ಕಾಲೇಜಿನಲ್ಲಿದ್ದಾಗ ನಾಟಕದಲ್ಲಿ ಬಹುಮಾನವನ್ನು ಪಡೆದದ್ದೇ ಅಲ್ಲದೆ, ಪ್ರಸಿದ್ಧ ಸಿನೆಮಾ ನಿರ್ದೇಶಕ ಜಿ. ವಿ. ಅಯ್ಯರ್ ಅವರ ಕಣ್ಣಿಗೆ ಬಿದ್ದು ಅವರ ಆಹ್ವಾನದ ಮೇರೆಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದರು. ಸಿ ಆರ್ ಸಿಂಹ, ಅನಂತನಾಗ್ ಅಭಿನಯದ “ಸಂಕಲ್ಪ” ಸಿನಿಮಾದಲ್ಲೂ ಇವರು ಮುಖ್ಯ ಪಾತ್ರ ವಹಿಸಿದ್ದು ಮಾತ್ರವಲ್ಲದೆ ಸಹ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆಯ ಅನುಭೂತಿ ಪಡೆದವರು. ಮೈಸೂರು ರಂಗಾಯಣದಲ್ಲಿ ಗಿಲಿ ಗಿಲಿ ಜಾದೂ ನಡೆದಾಗ ಬಿ ವಿ ಕಾರಂತರು ಬಂದು ಪೂರ್ಣ ಪ್ರದರ್ಶನ ನೋಡಿ ಗ್ರೀನ್ ರೂಮಿಗೆ ಬಂದು “ಮ್ಯಾಜಿಕ್ ಅನ್ನೋದು ನಾಟಕಕ್ಕೆ ಬೇಕು. ಹಾಗೆ ನಾಟಕ ಕೂಡ ಮ್ಯಾಜಿಕ್ ಗೆ ಬೇಕು. ನಿಮ್ಮ ಮ್ಯಾಜಿಕ್ ನ ನಾಟಕೀಯ ಎಷ್ಟು ಬೇಕೋ ಅಷ್ಟೇ ಇದ್ದು, ಆ ಅಂಶ ತುಂಬಾ ಇಷ್ಟವಾಯಿತು ಎಂದದ್ದು ಇವರ ನಾಟಕದೊಳಗಿನ ಮ್ಯಾಜಿಕ್ ನ ಹೆಗ್ಗಳಿಕೆ.
ವೃತ್ತಿ ಜೀವನದಲ್ಲಿ ನಿವೃತ್ತಿಯ ಬಳಿಕ ಜಾದೂವಿನೊಂದಿಗೆ ಸಮಾಜ ಸೇವೆ ಇವರ ಪ್ರವೃತ್ತಿಯಾಗಿದ್ದು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವಾಧ್ಯಕ್ಷರಾಗಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಪರಿಸರಸ್ನೇಹಿ ಉದ್ದಿಮೆಗಳ ಸ್ಥಾಪನೆಯಾಗಬೇಕು, ತನ್ಮೂಲಕ ಜಿಲ್ಲೆಯು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವ ಸಂಸ್ಥೆಯ ಧ್ಯೇಯದೊಂದಿಗೆ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬೆಂಬಲಿಸಿದ್ದಾರೆ.
ಉಡುಪಿಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆ ಸಂಸ್ಕ್ರತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಗಳ ಆಯೋಜನೆಗೆ ಸಹಕರಿಸಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಪ್ರೊ. ಶಂಕರ್ ಹಾಗೂ ಅವರ ಗಿಲಿ ಗಿಲಿ ಮ್ಯಾಜಿಕ್ ತಂಡ ದೇಶ ವಿದೇಶಗಳಲ್ಲಿ ಮನೆ ಮಾತಾಗಿದ್ದು, ಅನೇಕ ಗೌರವಾನ್ವಿತ ಸಂಸ್ಥೆಗಳು ಪ್ರಶಸ್ತಿ ಸಮ್ಮಾನಗಳ ತೋರಣದಿಂದ ಇವರನ್ನು ಗೌರವಿಸಿವೆ.
ತಮ್ಮ ಪುತ್ರ ತೇಜಸ್ವಿ ಜೂನಿಯರ್ ಶಂಕರ್ ಗೆ ಜಾದೂ ತರಬೇತಿ ನೀಡಿ, ಆತ ತನ್ನ ಮೂರನೇ ವರುಷದ ಎಳೆ ವಯಸ್ಸಿನಲ್ಲಿಯೇ ಅಮೆರಿಕದಲ್ಲಿ 50,000 ಜನರ ಮುಂದೆ ಜಗತ್ಪ್ರಸಿದ್ಧ “ಹೌದಿನಿ ಜಾದು” ಪ್ರದರ್ಶಿಸುವಂತೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ . ತೇಜಸ್ವಿ ಜೂನಿಯರ್ ಶಂಕರ್ ಇಂದು ಜಗತ್ತಿನ ಶ್ರೇಷ್ಠ ಜಾದೂ ದಿಗ್ಗಜರೆಲ್ಲ ಅತ್ಯಂತ ಗೌರವಿಸುವ ಜಾದೂಗಾರ.
ಗೆಳೆತನಕ್ಕೆ ಮಹತ್ವ ನೀಡುವ ಇವರು ಬಾಲ್ಯದಿಂದಲೇ ತಮ್ಮ ಸಹಪಾಠಿಯಾಗಿದ್ದು ಸದಾ ಜೊತೆಗಿದ್ದು ತನ್ನ ಜಾದೂ ಜಗತ್ತಿನ ಪಯಣದಲ್ಲಿ ಸಂಗೀತ ವಿನ್ಯಾಸ ನೀಡಿದ ಮೂರ್ತಿ ದೇರಾಜೆ ಅವರ ಮಗನಿಗೆ ತನ್ನ ಮಗಳನ್ನು ಮದುವೆ ಮಾಡಿಸಿ, ಅವರ ಮಗಳನ್ನು ತನ್ನ ಸೊಸೆಯಾಗಿ ಸ್ವೀಕರಿಸಿ ಗೆಳೆತನಕ್ಕೆ ನೆಂಟಸ್ತಿಕೆಯ ಸ್ವರೂಪ ತಂದು ಸಂಬಂಧವನ್ನು ಮತ್ತಷ್ಟು ಗಾಢವಾಗಿಸಿ ಸ್ನೇಹ ಹಾಗೂ ಸಂಬಂದಕ್ಕೊಂದು ವಿಶೇಷ ಪರಿಭಾಷೆ ನೀಡಿದವರು. ಪ್ರೀತಿಯ ಪತ್ನಿ ಲಕ್ಷ್ಮಿ ಶಂಕರ್, ಅಕ್ಕರೆಯ ಮಗ ತೇಜಸ್ವಿ ಶಂಕರ್, ಮಮತೆಯ ಸೊಸೆ ಮೈಥಿಲಿ ತೇಜಸ್ವಿ, ನಲ್ಮೆಯ ಮೊಮ್ಮಗ ವರ್ಚಸ್ವಿ, ತೇಜಸ್ವಿ, ಪ್ರೀತಿಯ ಮಗಳು ಯಶಸ್ವಿನಿ ದೇರಾಜೆ, ವಾತ್ಸಲ್ಯದ ಅಳಿಯ ಭಾರವಿ ದೇರಾಜೆ, ಒಲವಿನ ಮೊಮ್ಮಗಳು ನಿಹಾರಿಕಾ ದೇರಾಜೆ, ಆತ್ಮೀಯ ಬೀಗರಾದ ಮೂರ್ತಿ ದೇರಾಜೆ ಮತ್ತು ಪಾಣಿನಿ ದೇರಾಜೆ ಹೀಗೆ ಎರಡೂ ಕುಟುಂಬದ ಸದಸ್ಯರು ಸಕ್ರಿಯವಾಗಿ ಪ್ರೊ. ಶಂಕರ್ ಅವರ ಜೊತೆ ಗಿಲಿ ಗಿಲಿ ಜಾದೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾದೂ ಪಯಣಕ್ಕೆ ಸಾಥ್ ನೀಡುತ್ತಲಿದ್ದು, ದೇಶದ ಏಕಮೇವ ಫ್ಯಾಮಿಲಿ ಟ್ರೂಪ್ ಎಂದು ಇಡೀ ವಿಶ್ವದಿಂದ ಶಹಬಾಸ್ ಪಡೆದುಕೊಂಡ ಜಾದೂ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಮ್ಮ ಸಾಂಸ್ಕೃತಿಕ ನಗರಿ ಉಡುಪಿಯನ್ನು ಜಾಗತಿಕ ಮಟ್ಟದಲ್ಲಿ ಜಾದೂ ಪ್ರಪಂಚದಲ್ಲಿ ಗುರುತಿಸುವಂತೆ ಮಾಡಿದ ಅದ್ಭುತ ವ್ಯಕ್ತಿ ಪ್ರೊಫೆಸರ್. ಶಂಕರ್ ನಿಮಗಿದೋ ಅಭಿಮಾನ ಪೂರ್ವಕ ಅಭಿನಂದನೆ. ಅಭಿವಂದನೆ.