ಪಡುಬಿದ್ರಿ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಮರುನಿರ್ಮಾಣಕ್ಕೆ ಅದಾನಿ ಸಂಸ್ಥೆಯಿಂದ ಚಾಲನೆ (Drive by ADANI for reconstruction of road leading by Padubidri Railway Station)
ಪಡುಬಿದ್ರಿ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಮರುನಿರ್ಮಾಣಕ್ಕೆ ಅದಾನಿ ಸಂಸ್ಥೆಯಿಂದ ಚಾಲನೆ
(Padubidri): ಪಡುಬಿದ್ರಿ: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಪು ಗ್ರಾಮದಲ್ಲಿರುವ ಪಡುಬಿದ್ರಿ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಮರುನಿರ್ಮಾಣಕ್ಕೆ ಬೆಳಪು ಗ್ರಾ.ಪಂ. ಶಿಫಾರಸ್ಸಿನಂತೆ ಅದಾನಿ ಫೌಂಡೇಷನ್ ಸಿಎಸ್‌ಆರ್ ಯೋಜನೆಯಡಿ 17 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ.
ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು.
ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ಬೆಳಪು ಗ್ರಾಮದ ಸಾಧನೆ ಶ್ಲಾಘನೀಯವಾಗಿದೆ. ಕೆಜಿಯಿಂದ ಪಿಜಿಯವರೆಗಿನ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಸಹಿತವಾಗಿ ನಿರಂತರ ಪ್ರಗತಿಯಲ್ಲಿರುವ ಬೆಳಪು ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಅದಾನಿ ಸಂಸ್ಥೆಗೂ ಕೈ ಜೋಡಿಸುವ ಅವಕಾಶ ದೊರಕಿದೆ. ಅದಾನಿ – ಯುಪಿಸಿಎಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅದಾನಿ ಫೌಂಡೇಷನ್‌ನ ಸಿಎಸ್‌ಆರ್ ನಿಧಿಯಡಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 22.72 ಕೋ. ರೂ. ಮೀಸಲಿರಿಸಲಾಗಿದ್ದು ಅದರಲ್ಲಿ ಈಗಾಗಲೆ 13 ಕೋ. ರೂ. ವೆಚ್ಚದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದೆಯೂ ಗ್ರಾಮಾಭಿವೃದ್ಧಿ ಮತ್ತು ಮೂಲಕಸೌಕರ್ಯಗಳ ಜೋಡಣೆಗೆ ತಮ್ಮ ಸಹಕಾರ ನೀಡಲಾಗುವುದು ಎಂದರು.
ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕೊಂಕಣ ರೈಲ್ವೇ ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಪಟ್ಟಿರುವ ಬೆಳಪು ರೈಲ್ವೇ ನಿಲ್ದಾಣ ರಸ್ತೆಯ ಅಭಿವೃದ್ಧಿಯ ಬಗ್ಗೆ ಈ ಭಾಗದ ಜನರು ಹಲವು ವರ್ಷಗಳಿಂದ ಮನವಿ ನೀಡುತ್ತಾ ಬರುತ್ತಿದ್ದಾರೆ. ಈ ಬಗ್ಗೆ ಗ್ರಾಮಸಭೆಯಲ್ಲಿಯೂ ಗದ್ದಲವುಂಟಾಗಿತ್ತು. ಈ ನಿಟ್ಟಿನಲ್ಲಿ ಗ್ರಾ.ಪಂ. ವತಿಯಿಂದ ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದ್ದು, ರಸ್ತೆ ಅಭಿವೃದ್ಧಿಗೆ ಅದಾನಿ ಫೌಂಡೇಷನ್‌ನ ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳಲಾಗಿದೆ. ರಸ್ತೆ ವಿಸ್ತರಣೆ ಮತ್ತು ಸಂಬಂಧಪಟ್ಟ ಕಾಮಗಾರಿಗೆ ಇನ್ನಷ್ಟು ವೇಗ ನೀಡಲಾಗುವುದು ಎಂದರು.
ಕೊಂಕಣ ರೈಲ್ವೇ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮಾತನಾಡಿ, ಪಡುಬಿದ್ರಿ ರೈಲ್ವೇ ನಿಲ್ದಾಣ ರಸ್ತೆ ದುರಸ್ತಿಗೆ ಬೆಳಪು ಗ್ರಾ. ಪಂ. ಮನವಿಯ ಮೇರೆಗೆ ಅದಾನಿ ಫೌಂಡೇಷನ್ ಮುಂದಾಗಿರುವುದು ಖುಷಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ, ಮೇಲ್ದರ್ಜೆಗೇರಿಸಿ ಸ್ಥಳೀಯರ ಬೇಡಿಕೆಯಂತೆ ವಿವಿಧ ರೈಲುಗಳ ನಿಲುಗಡೆಗೆ ಅವಕಾಶ ದೊರಕುವಂತಾಗಲಿ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ನಿಗಮದ ಅಽಕಾರಿಗಳೊಂದಿಗೆ ಪತ್ರ ವ್ಯವಹಾರವನ್ನೂ ನಡೆಸಲಾಗಿದೆ ಎಂದರು.
ಬೆಳಪು ಗ್ರಾ. ಪಂ. ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಸೌಮ್ಯ ಸುರೇಂದ್ರ, ಶರತ್ ಕುಮಾರ್, ಸುಲೇಮಾನ್, ಉಷಾ ವಾಸು, ಸ್ಥಳೀಯ ಪ್ರಮುಖರಾದ ಕೊರಗ ಶೆಟ್ಟಿ ಬೆಳ್ಳಿಬೆಟ್ಟು ಗುತ್ತು, ಹರೀಶ್ ಶೆಟ್ಟಿ ಬಡಗರಗುತ್ತು, ಅಶೋಕ್ ಪೂಜಾರಿ ನಾಂಜಾರು ಸಾನದಮನೆ, ಮಹೇಶ್ ಶೆಟ್ಟಿ ಹೊಸಮನೆ, ವಸುಂಧರ ಶೆಟ್ಟಿ, ರೈಲ್ವೇ ಎಸ್ ಆಂಡ್ ಟಿ ಶ್ರೀಜಿತ್ ಕುಮಾರ್, ವಾಸುದೇವ ರಾವ್, ಅದಾನಿ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್‌ನ ಅನುದೀಪ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ರೈಲ್ವೇ ಅಧಿಕಾರಿಗಳಿಗೆ ಮನವಿ
ಬೆಳಪು ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪಿತವಾಗಿದ್ದು, ಗ್ರಾಮವು ದಿನೆದಿನೇ ಅಭಿವೃದ್ಧಿ ಹೊಂದುತ್ತಿದ್ದು, ರೈಲಿನ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಬೆಂಗಳೂರು ಹಾಗೂ ಮುಂಬಯಿಗೆ ತೆರಳುವ ರೈಲುಗಳು ಪಡುಬಿದ್ರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಬೇಕಿವೆ. ಇಲ್ಲಿ ಹಿಂದೆ ನಿಲುಗಡೆಯಾಗುತ್ತಿದ್ದ ಡೆಮು ಟ್ರೈನ್ ನಿಲುಗಡೆಯಾಗುತ್ತಿಲ್ಲ. ಅದನ್ನು ಈಗಿನಿಂದಲೇ ನಿಲುಗಡೆಗೊಳಿಸಬೇಕಿದೆ. ಇಲ್ಲಿನ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೇರಿಸಲು ರೈಲ್ವೇ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ರೈಲ್ವೇ ಅಧಿಕಾರಿಗಳಲ್ಲಿ ಮನವಿ ಮಾಡಿದರು.