ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯಿಂದ ದಿ. ಕೆ. ಲೀಲಾಧರ ಶೆಟ್ಟಿ ಪುಣ್ಯ ಸ್ಮರಣ
(Kaup) ಕಾಪು ; ಕರಂದಾಡಿಯ ದಿ.ಲೀಲಾಧರ ಶೆಟ್ಟಿ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರ ತಂಡ ಅರ್ಥಪೂರ್ಣವಾಗಿ ಆಚರಿಸಿತು.
ಡಿಸೆಂಬರ್ 12 ರಂದು ಸಂತೆಕಟ್ಟೆಯ ಪ್ರಗತಿನಗರದಲ್ಲಿರುವ ಸ್ಪಂದನಾ ದಿವ್ಯಾಂಗರ ಸಂರಕ್ಷಣಾ ಸಂಸ್ಥಗೆ ಭಜನಾ ಮಂಡಳಿಯ ಸದಸ್ಯರು ತೆರಳಿ, ಆ ಸಂಸ್ಥೆಗೆ ಉಪಯುಕ್ತವೆನಿಸುವ ಸಾವಿರಾರು ರೂಪಾಯಿ ಮೌಲ್ಯದ ಹೊದಿಕೆ, ಸಾಬೂನು, ಬಕೆಟು, ಫಿನಾಯಿಲ್ ಮೊದಲಾದ ಇನ್ನಿತರ ವಸ್ತುಗಳನ್ನು ನೀಡಿ, ಲೀಲಾಧರ ಶೆಟ್ಟಿ ಅವರಿಗೆ ಅತ್ಯಂತ ಪ್ರಿಯವಾದ ಕುಣಿತ ಭಜನೆಯನ್ನೂ ನಡೆಸಿ ಅಲ್ಲಿನ ದಿವ್ಯಾಂಗರ ಮನವನ್ನು ಗೆದ್ದರು.
ಭಜನೆಯಲ್ಲಿ ದಿವ್ಯಾಂಗರೂ ಪಾಲ್ಗೊಂಡರು.
“ನಮ್ಮೆಲ್ಲರ ಪ್ರೀತಿಯ ಲೀಲಣ್ಣ ಸದಾ ನಮ್ಮೊಂದಿಗೆ ಇರುವವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಇನ್ನಷ್ಟು ಅವರ ಪ್ರೀತಿಗೆ ಪಾತ್ರರಾಗುವಂತಹ ಕೆಲಸ ಮಾಡಬೇಕಿದೆ. ಸ್ಪಂದನಾ ಸಂಸ್ಥೆ ನಮಗೆ ಮುಂದಿನ ದಿನಗಳಲ್ಲಿಯೂ ಇಂತಹ ಸೇವೆಗೆ ಅವಕಾಶ ಮಾಡಿ ಕೊಡುವಂತಾಗಲಿ” ಎಂದು ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀಧರ ಶೆಟ್ಟಿಗಾರ್ ಅವರು ತಿಳಿಸಿದರು.
ಸ್ಪಂದನಾ ಸಂಸ್ಥೆಯ ರುವಾರಿ ಉಮೇಶ್ ಅವರು ಭಜನಾ ಮಂಡಳಿಯ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಂಡಳಿಯ ಪದಾಧಿಕಾರಿಗಳಾದ ಅವಿನಾಶ್ ಶೆಟ್ಟಿ, ಅರುಣ್ ರಾವ್, ರವೀಂದ್ರ ಆಚಾರ್ಯ, ಸದಸ್ಯರಾದ ಸದಾಶಿವ ಶೆಟ್ಟಿಗಾರ್, ಸುರೇಂದ್ರ ಪೂಜಾರಿ, ರವಿ ನಾಯ್ಕ್, ಗಣೇಶ್ ನಾಯ್ಕ್, ಯಶವಂತ್ ಶೆಟ್ಟಿಗಾರ್, ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ನಾಯ್ಕ್, ಪದಾಧಿಕಾರಿಗಳಾದ ಸುನೀತಾ ಪೂಜಾರಿ, ದೇವಿಕಾ ಶೆಟ್ಟಿ, ಶ್ವೇತಾ ಶೆಟ್ಟಿ, ಸದಸ್ಯರಾದ ಡಾ.ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.