ಭಾಷೆ ಎಂದರೆ ಸರ್ವಸ್ವ- ಲಕ್ಷ್ಮೀಶ ತೋಳ್ಪಾಡಿ(Language is everything : Laxmisha Tholpady)
ಭಾಷೆ ಎಂದರೆ ಸರ್ವಸ್ವ– ಲಕ್ಷ್ಮೀಶ ತೋಳ್ಪಾಡಿ
ಕಟೀಲು ನುಡಿಹಬ್ಬ ಸಮಾರೋಪ
(Kateelu) ಕಟೀಲು : ಭಾಷೆ ಕೇವಲ ವ್ಯಾವಹಾರಿಕ ಅಲ್ಲ, ಎಲ್ಲವೂ ಹೌದು. ಭಾಷೆ ಎಂದರೆ ಮನುಷ್ಯನ ಸರ್ವಸ್ವ ಎಂದು ಕಟೀಲು ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನುಡಿಹಬ್ಬ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಭಾಷೆ ಇಲ್ಲ ಎಂದರೆ ಚರಿತ್ರೆಯೇ ಇಲ್ಲ ಎನ್ನುವ ಅರ್ಥವೂ ಆಗುತ್ತದೆ. ನಡೆದಂತೆ ನುಡಿ, ನುಡಿದಂತೆ ನಡೆ ಎನ್ನುವುದು ಭಾಷೆ ಎಂದು ಮಾತಿನ ಬಗ್ಗೆ ಮಾತಿದೆ. ನೃತ್ಯ, ಯಕ್ಷಗಾನ ಹೀಗೆ ಎಲ್ಲ ಕಡೆಯೂ ಕ್ರಮ ತಪ್ಪಬಾರದು ಎಂದಂತೆ ತಪ್ಪಾಗಬಾರದು.
ಮಕ್ಕಳು ನಮ್ಮ ಮಾತುಗಳನ್ನು ಸ್ವರವನ್ನು, ಸ್ವರದಲ್ಲಿರುವ ಅರ್ಥ, ಆಂಗಿಕಗಳು ಹೀಗೆ ಪದವನ್ನು ಮಾತ್ರ ಅಲ್ಲ, ಎಲ್ಲವನ್ನೂ ಗಮನಿಸುತ್ತಾರೆ. ಜೀವನ ಅಂದರೆ ಸಂಪರ್ಕ. ಕಟೀಲು ತಾಯಿ ಅಂದರೆ ಆಧ್ಯಾತ್ಮಿಕ ಸಂಕೇತ. ಕಲೆಗೂ ಆಧ್ಯಾತ್ಮಕ್ಕೂ ಬಹಳ ಹತ್ತಿರ ಸಂಬಂಧ ಇದೆ. ಕಲೆ ಅಂದರೆ ನಮ್ಮನ್ನು ಮರೆತು ಇನ್ನೊಂದು ಪಾತ್ರವಾಗುವುದು. ನಮ್ಮನ್ನು ನಾವು ಮರೆತಂತೆ ಇರುವುದು ಕಲೆ.
ತಬ್ಬಲಿಯಾಗದೆ, ಅನಾಥರಾಗದೆ ನಾಥನು ಸಿಗುವುದಿಲ್ಲ. ಅಂದರೆ ದೇವರು ಸಿಗುವುದಿಲ್ಲ. ತಬ್ಬಲಿತನ ಬಂದಾಗ ತಾಯಿ ಅಂದರೆ ದೇವಿಯ ಆರಾಧನೆ, ಇದೇ ದೇವೀಮಾಹಾತ್ಮ್ಯೆ. ಇದು ಆಧ್ಯಾತ್ಮದ ರಹಸ್ಯ ಎಂದು ತೋಳ್ಪಾಡಿ ಹೇಳಿದರು.
ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಸಮಾಜವನ್ನು ಉಳಿಸುವ ರೂಪಕದಂತೆ ಆಧ್ಯಾತ್ಮ. ಸಾಹಿತ್ಯ ನಮ್ಮನ್ನು ನಿಜವಾಗಿ ಜೀವಿಸುವಂತೆ ಮಾಡುತ್ತದೆ. ಹೃದಯಕ್ಕೆ ಬೇಕಾದದ್ದು ಏನು? ಆಘಾತವಲ್ಲ, ವಿದ್ರಾವಕವಾದ ಅನುಭವ. ಕರಗಬೇಕು ಹೃದಯ. ಘನಿಸಬಾರದು. ಅಹಂಕಾರ ಇರಬಾರದು ಎಂದು ಅವರು ಹೇಳಿದರು.
ವಾಗ್ಮಿ ಗಣೇಶ ಅಮೀನ್ ಸಂಕಮಾರ್ ಮಾತನಾಡಿ, ಭಾಷೆಗೆ, ನಾಡುನುಡಿಗೆ ಸಂಬಂಧಿಸಿದ ಸಮ್ಮೇಳನಗಳು ಮರೆತು ಹೋಗುವ ಚರಿತ್ರೆಯನ್ನು ಕಟ್ಟುವ ಕೆಲಸ ಮಾಡುತ್ತವೆ ಎಂದರು.
ಸಾಧಕ ಹಿರಿಯ ವಿದ್ಯಾರ್ಥಿ ಸಿಎ ಚಂದ್ರಶೇಖರ ಶೆಟ್ಟಿ ಅವರನ್ನು ಸಂಮಾನಿಸಲಾಯಿತು.
ಮುಲ್ಕಿ – ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಎಂ.ಎಸ್. ಗುರುರಾಜ್, ಉದ್ಯಮಿ ರಾಮ ಪ್ರಕಾಶ ಹೊಳ್ಳ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್, ಸಾಹಿತಿ ಗಣೇಶ ಅಮೀನ್ ಸಂಕಮಾರ್, ನಿವೃತ್ತ ಪ್ರಾಚಾರ್ಯ ಜಯರಾಮ ಪೂಂಜ, ನಿವೃತ್ತ ಶಿಕ್ಷಕರಾದ ಕೇಶವ ಹೊಳ್ಳ, ಉಮೇಶ್ ರಾವ್ ಎಕ್ಕಾರು, ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಅನಂತ ಆಸ್ರಣ್ಣ, ಪ್ರಸಾದ ಶೆಟ್ಟಿ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ, ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ ಮತ್ತಿತರರಿದ್ದರು. ಪ್ರದೀಪ್ ಹಾವಂಜೆ ನಿರೂಪಿಸಿದರು.
ಸಾಧಕ ಹಿರಿಯ ವಿದ್ಯಾರ್ಥಿ ಸಿಎ ಚಂದ್ರಶೇಖರ ಶೆಟ್ಟಿ ಅವರನ್ನು ಸಂಮಾನಿಸಲಾಯಿತು.