ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme suresh Shetty)
ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ
(Padubidri) ಪಡುಬಿದ್ರಿ : ಮಗು ಪರೀಕ್ಷೆಯಲ್ಲಿ ಸೋತರೆ ಚಿಂತೆಯಿಲ್ಲ, ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಹೃದಯದಲ್ಲಿ ಪಸರಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ ನೀಡಿದರು.
ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು ಎಜುಕೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿಯನ್ನು ಉದ್ಘಾಟಿಸಿ, ನಂದನ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳ ವಯಸ್ಸಿನಲ್ಲಿ ಅವರ ಬದುಕನ್ನು ರೂಪಿಸುವ ಕಾರ್ಯಗಳಾಗಬೇಕು. ಅಧ್ಯಯನ, ಅಧ್ಯಾಪನ ಮತ್ತು ಅನುಸಂಧಾನ ಒಟ್ಟಾಗಿ ಸಾಗಬೇಕು. ಮಕ್ಕಳಲ್ಲಿ ಪ್ರೀತಿಯಿಂದ ಮಾತನಾಡಬೇಕು, ವಿಶೇಷ ಗುಣಗಳನ್ನು ಗಮನಿಸಿ ಪ್ರತಿಭೆಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದರು.
ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ವಾರ್ಷಿಕೋತ್ಸವ ಧ್ವಜಾರೋಹಣ ನೇರವೇರಿಸಿದರು.
ನಂದಿಕೂರು ಎಜುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿವಾಲ್ ನಂದಿಕೂರು ಎಜುಕೇಶನ್ ಟ್ರಸ್ಟ್ ಕಚೇರಿ ಉದ್ಘಾಟಿಸಿದರು.
ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಗ್ರಾಪಂ ಸದಸ್ಯ ಸತೀಶ್ ದೇವಾಡಿಗ, ಟ್ರಸ್ಟ್ ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಕಾರ್ಯದರ್ಶಿ ಸಿಎ ಅನಿಲ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾಗರಾಜ್ ಭಟ್, ಆಡಳಿತಾಧಿಕಾರಿ ಎಂ. ಸಾಯಿನಾಥ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ರಮಣಿ, ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಂದಿಕೂರು ಶ್ರೀ ರಾಮ ದೇವಸ್ಥಾನ ವ್ಯವಸ್ಥಾಪಕ ವಸಂತ ಶೆಟ್ಟಿ, ಸುರೇಖಾ ಶೆಟ್ಟಿ, ಸುಪ್ರಿಯ ಸುರೇಶ್ ಶೆಟ್ಟಿ, ಶೋಭಾ, ಶಾಲಾ ವಿದ್ಯಾರ್ಥಿ ನಾಯಕ ನೀರಜ್ ಆರ್ ಶೆಟ್ಟಿ ಉಪಸ್ಥಿತರಿದ್ದರು.
ಶೈಕ್ಷಣಿಕ ಉಪನ್ಯಾಸ
ವಾರ್ಷಿಕೋತ್ಸವ ಅಂಗವಾಗಿ ಆಧುನಿಕ ಶಿಕ್ಷಣ ಪದ್ಧತಿ ಹಾಗೂ ಪೋಷಕರ ಜವಾಬ್ದಾರಿ ಕುರಿತು ಶೈಕ್ಷಣಿಕ ಉಪನ್ಯಾಸ ನೀಡಿದ ಶಿಕ್ಷಕ ರಾಜೇಂದ್ರ ಭಟ್ ಕೆ., ಮಕ್ಕಳ ಭವಿಷ್ಯವನ್ನು ಪಾಲಕರು ಒತ್ತಾಯಿಸಿ ಹೇರದೆ, ಅವರೇ ನಿರ್ಧರಿಸುವಂತಾಗಬೇಕು. ಅಂಕಗಳ ಹಿಂದೆ ಕಂಬಳದ ಕೋಣಗಳ ಹಾಗೆ ಓಡಿಸುವ ಮೂಲಕ ಮಕ್ಕಳ ಮಾನಸಿಕತೆಗೆ ಮೇಲಾಗುವ ದುಷ್ಪರಿಣಾಮಕ್ಕೆ ಪಾಲಕರೇ ಹೊಣೆಗಾರರಾಗುತ್ತಿದ್ದಾರೆ.
ಒಂದು ಕಾಲದಲ್ಲಿ ಮಕ್ಕಳು ಪ್ರೀತಿಯಿಂದ ಹಾಳಾಗುತ್ತಿದ್ದರೆ, ಇಂದು ಪ್ರೀತಿಯ ಹಸಿವೆಯಿಂದ ಹಾಳಾಗುತ್ತಿದ್ದಾರೆ. ಪಾಲಕರು ನೀಡಲಾಗದಂತಹ ಪ್ರೀತಿಯನ್ನು ಮೊಬೈಲ್, ಜಾಲತಾಣಗಳ ಮೂಲಕ ಹುಡುಕಲಾರಂಭಿಸಿದ್ದಾರೆ. ಈ ಬಗ್ಗೆ ಪಾಲಕರು ಯೋಚನೆ ಮಾಡಬೇಕಿದೆ. ಮಕ್ಕಳ ಭವಿಷ್ಯ ರೂಪಿಸಲು ಅವಕಾಶಗಳಿವೆ. ಮಕ್ಕಳಿಗೆ ಒತ್ತಡ ಹೆರದಿರಿ, ಮಕ್ಕಳನ್ನು ಪ್ರೀತಿ ಮಾಡಿ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.