ಮಜೂರು ಗ್ರಾಮ ಪಂಚಾಯತಿಯ ತ್ರೈಮಾಸಿಕ ಕೆಡಿಪಿ ಸಭೆ (KDP Meeting at Majooru Grama Panchayath)
ಮಜೂರು ಗ್ರಾಮ ಪಂಚಾಯತಿಯ ತ್ರೈಮಾಸಿಕ ಕೆಡಿಪಿ ಸಭೆ
(Majooru) ಮಜೂರು: ಮಜೂರು ಗ್ರಾಮ ಪಂಚಾಯತಿಯ 2024 ನೇ ಸಾಲಿನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ (20 ಅಂಶ) ಪ್ರಗತಿ ಪರಿಶೀಲನಾ ತ್ರೈಮಾಸಿಕ ಕೆಡಿಪಿ ಸಭೆಯು ಮಜೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರುರವರು ಅಧ್ಯಕ್ಷತೆ ವಹಿಸಿದ್ದರು.
ಹಲವಾರು ಇಲಾಖಾಧಿಕಾರಿಗಳು ಗೈರು ಹಾಜರಾಗಿರುವುದರಿಂದ ಗ್ರಾಮದ ಪ್ರಗತಿಯು ಸಂಪೂರ್ಣವಾಗದೆ ಅಭಿವೃದ್ದಿ ಕೆಲಸಗಳು ಕುಂಠಿತವಾಗಿರುತ್ತದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಕೆಡಿಪಿ ಸಭೆಯಲ್ಲಿ ಹಾಜರಿದ್ದ ಇಲಾಖಾ ಅಧಿಕಾರಿಗಳು ಇಲಾಖಾವಾರು ಪ್ರಗತಿ ಪರಿಶೀಲಿಸಲಾಯಿತು.
ಶಿಕ್ಷಣ ಇಲಾಖೆ: ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಸ್ಥಾವನೆ ಇರುವುದಾಗಿ ಸಿ ಆರ್ ಪಿ ತಿಳಿಸಿದರು.
ಆರೋಗ್ಯ ಇಲಾಖೆ: ಎಲ್ಲಾ ಕಾರ್ಯಕ್ರಮಗಳು ಶೇ.100 ರಷ್ಟು ಪ್ರಗತಿಯಾಗಿದ್ದು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಇಲಾಖಾ ಸಿಬಂದಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಎಂದು ತಿಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ : ಕಾರ್ಯಕ್ರಮಗಳು ಶೇ100 ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಿತು.
ನ್ಯಾಯಬೆಲೆ ಅಂಗಡಿ: ಬಿಪಿಎಲ್ ಪಡಿತರ ಚೀಟಿ ಪರಿಶೀಲನೆ ರದ್ದು ಬಗ್ಗೆ ಬಂದ ಅರ್ಜಿಯನ್ನು ಪರಿಶೀಲಿಸಿದ್ದು, ಈವರೆಗೆ ಯಾವುದನ್ನೂ ರದ್ದುಗೊಳಿಸಿಲ್ಲವೆಂದು ಸಭೆಗೆ ಮಾಹಿತಿಯನ್ನು ನೀಡಲಾಯಿತು.
ಹಾಲು ಉತ್ಪಾದಕರ ಸಂಘ: ಹಾಲಿನ ಪ್ರಮಾಣ ಕಡಿಮೆಯಾಗಿದ್ದು ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಹೈನುಗಾರಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಲಾಯಿತು.
ಗ್ರಂಥಾಲಯ: ಓದುಗರ ಸಂಖ್ಯೆಯನ್ನು ಹೆಚ್ಚಿಸುವಂತೆ ಹಾಗೂ ಮಕ್ಕಳ ಸ್ನೇಹಿ ಗ್ರಂಥಾಲಯವಾಗಿ ಪರಿವರ್ತಿಸುವಂತೆ ತಿಳಿಸಲಾಯಿತು.
ಗ್ರಾಮ ಪಂಚಾಯತ್: ನರೇಗಾ ಯೋಜನೆ, ವಸತಿ ಯೋಜನೆ, ತೆರಿಗೆ ವಸೂಲಾತಿ ಹಾಗೂ 15 ನೇ ಹಣಕಾಸು, ಶೇ25, ಶೇ5, ಹಾಗೂ ಇತರ ಅಭಿವೃದ್ದಿ ಕಾರ್ಯಕ್ರಮವನ್ನು 2024 ಮಾರ್ಚ್ ತಿಂಗಳ ಅಂತ್ಯದೊಳಗೆ ಶೇ100 ಸಾಧಿಸುವಂತೆ ತಿಳಿಸಲಾಯಿತು.
ಕಂದಾಯ: ನೆರೆಹಾನಿ ಮನೆಗಳು, ಬೆಳೆಹಾನಿ ಮುಂತಾದ ಪರಿಹಾರದ ಬಗ್ಗೆ ಚರ್ಚಿಸಿ ಬಾಕಿ ಇರುವ ಪರಿಹಾರಧನವನ್ನು ಕೂಡಲೇ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳು ಬಗ್ಗೆ ತಿಳಿಸಲಾಯಿತು.
ಮೆಸ್ಕಾಂ: ಲೋವೋಲ್ಟೇಜ್ ಸಮಸ್ಯೆ, ವಿದ್ಯುತ್ ಲೈನುಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ತೆರವು ಗೊಳಿಸುವ ಬಗ್ಗೆ ಕ್ರಮ ವಹಿಸುವಂತೆ ತಿಳಿಸಲಾಯಿತು.
ಉಪಾಧ್ಯಕ್ಷರಾದ ಶ್ರೀಮತಿ ಮಂಜುಳ ಆಚಾರ್ಯ, ನ್ಯಾಯ ಸಮಿತಿ ಅಧ್ಯಕ್ಷರಾದ ವನಿತ, ಗ್ರಾ.ಪಂ ಸದಸ್ಯರಾದ ಸಂದೀಪ್ ರಾವ್, ವಿಜಯ್ ಧೀರಜ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ವಿಲಾಸಿನಿ, ಮೆಸ್ಕಾಂ ಇಲಾಖೆ , ಶಿಕ್ಷಣ ಇಲಾಖೆ, ಆರೋಗ್ಯ,ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗ್ರಂಥಾಲಯ, ಗ್ರಾಮ ಪಂಚಾಯತ್ ನ್ಯಾಯಬೆಲೆ ಅಂಗಡಿ, ಹಾಲು ಉತ್ಪಾಧಕರ ಸಹಕಾರಿ ಸಂಘದ ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಸಾದ್ ಭಂಡಾರಿ ಸ್ವಾಗತಿಸಿ ವಂದಿಸಿದರು.