ಮಣಿಪಾಲ ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ(Two documentaries on Manipal MAHE selected for International Folk Film Fastival)
ಮಣಿಪಾಲ ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ
(Manipala) ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಯ ಎರಡು ಸಾಕ್ಷ್ಯ ಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವದ 8 ನೆಯ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯ ಮಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.
ಐಎಫ್ಎಫ್ಎಫ್ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವಾಗಿದ್ದು, ಅದು ಸಿನೆಮಾದ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಸಲದ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಸುಮಾರು 800 ಚಿತ್ರಗಳು ಪ್ರವೇಶ ಬಯಸಿದ್ದು, ಈ ವರ್ಷ ಜಾನಪದ-ಆಧಾರಿತ ಕಥಾ ನಿರೂಪಣೆಯ ಸಮೃದ್ಧ ವೈವಿಧ್ಯವಿರುವ ಸುಮಾರು 200 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.
2025 ಜನವರಿ 10 ರಿಂದ 15 ರ ನಡುವೆ ಮಾಹೆಯ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಈ ಚಿತ್ರೋತ್ಸವವನ್ನು ತ್ರಿಶೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವ, ಭೌಮನ್ ಸೋಶಿಯಲ್ ಇನೀಶಿಯೇಟಿವ್, ತ್ರಿಶೂರಿನ ಸೆಂಟ್ ಥಾಮಸ್ ಕಾಲೇಜಿನ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಮತ್ತು ಇಂಟರ್ನ್ಯಾಶನಲ್ ಫೋಕ್ ಫಿಲ್ಮ್ಸ್ ಇಂಡಿಯಾ ಆಯೋಜಿಸುತ್ತಿವೆ.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ “ಪಿಲಿವೇಷ ಆಫ್ ತುಳುನಾಡು” ಮತ್ತು “ಸತ್ಯೊದ ಸಿರಿ : ಎ ವುಮನ್ಸ್ ಟೇಲ್” ಸಾಕ್ಷ್ಯಚಿತ್ರಗಳು ಪ್ರಾದೇಶಿಕವಾದ ಜೀವಂತಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಮಾಹೆಯ ಬದ್ಧತೆಗೆ ಸಾಕ್ಷಿಗಳಾಗಿವೆ.