ವಿಚ್ಛೇದನ ಹಂತದಲ್ಲಿ ಅಪರಿಚಿತರಿಂದ ಮಹಿಳೆಯ ಹಿಂಬಾಲಿಕೆ – ಪತಿಯಿಂದ ಸಂಚು – ಸಂಶಯ ವ್ಯಕ್ತಪಡಿಸಿದ ಮಹಿಳೆ
ಮಂಗಳೂರು: ವಿಚ್ಛೇದನ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆ ಒಬ್ಬರನ್ನು ಕಾರಿನಲ್ಲಿ ಹಿಂಬಾಲಿಸಿ ಬೆದರಿಸಲು ಪ್ರಯತ್ನ ಪಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯು ತನ್ನ ಪತಿಯ ವಿರುದ್ಧ ದೂರು ನೀಡಿದ್ದು ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆನಡಾ ದೇಶದ ಖಾಯಂ ನಿವಾಸಿ ಮೂಲತಃ ಮುಂಬಯಿಯ ಯುವತಿಯು ಮಂಗಳೂರಿನ ಫಳ್ನೀರ್ ನಿವಾಸಿ ಡಾ ಎಡ್ಮನ್ಡ್ ಫೆರ್ನಾಂಡೆಜ್ ಎಂಬವರನ್ನು ೨೦೨೦ರಲ್ಲಿ ಮದುವೆಯಾಗಿದ್ದು, ಮದುವೆಯಾದ ಬರೇ ೪೦ ದಿನದ ಅಂತರದಲ್ಲೇ ಮನಸ್ತಾಪ ಉಂಟಾದ ಕಾರಣ ವಿಚ್ಛೇದನದ ವರೆಗೆ ವಿಚಾರ ತಲುಪಿದ್ದು ನ್ಯಾಯಾಲಯದ ಮೆಟ್ಟಿಲು ಏರಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ.೧೯ರಂದು ಬೆಳಗ್ಗೆ ಕೌಟುಂಬಿಕ ನ್ಯಾಯಾಲಯಕ್ಕೆ ಮಹಿಳೆ ಹಾಜರಾಗಿದ್ದಾರೆ. ನ್ಯಾಯಾಲಯದಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಮಹಿಳೆಯನ್ನು ನೋಡಿ ಅಸಭ್ಯ ರೀತಿಯಲ್ಲಿ ಗುರಾಯಿಸಿ ನೋಡಿ, ಮೊಬಲ್‌ನಿಂದ ಫೋಟೊ ತೆಗೆದಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಬಳಿಕ ನ್ಯಾಯಾಲಯದಿಂದ ಹೊರಾಟ ಮಹಿಳೆಯು ನ್ಯಾಯಾಲಯದ ಹೊರ ಬದಿ ರಸ್ತೆಯ ಅಂಚಿನಲ್ಲಿ ತನ್ನ ಮನೆಯ ಕಡೆ ತೆರಳಲು ರಿಕ್ಷಾ ಏರಲು ನಿಂತಿರುವಾಗ ಅದೇ ಯುವಕರ ಕಾರು ಯುವತಿಯ ಕಾಲಿಗೆ ತಾಗಿಸಿಕೊಂಡು ಹೋಗುವಂತೆ ಬಂದಿದ್ದು , ಮಹಿಳೆ ಆಟೋದಲ್ಲಿ ತೆರಳುವಾಗ ಮತ್ತೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಹೆದರಿದ ಮಹಿಳೆಯು ಸ್ನೇಹಿತ ಅನೂಪ್ ಕಾಂಚನ್ ಎನ್ನುವವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು ಕೆಪಿಟಿಗೆ ಬರುವಂತೆ ತಿಳಿಸಿದ್ದಾರೆ.
ಅನಂತರ ಮಹಿಳೆ ಕೆಪಿಟಿ ಬಂದಾಗ ಅಲ್ಲಿಯೂ ಅಪರಿಚಿತ ಯುವಕರು ಫೋಟೋ ತೆಗೆದಿದ್ದಾರೆ. ಬಳಿಕ ಅನೂಪ್ ಕಾರಿನಲ್ಲಿ ಕುಳಿತು ಕೊಟ್ಟಾರ ಚೌಕಿ, ಲೇಡಿಹಿಲ್, ರಥಬೀದಿ ಮೂಲಕವಾಗಿ ಬಂದರು ಕಡೆಗೆ ಸಾಗಿದ ಯುವತಿಯು, ಅಲ್ಲಿಗೂ ಯುವಕರು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಬಳಿಕ ಬಂದರು ಠಾಣೆಯ ಕಡೆಗೆ ಸಾಗಿ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದು, ಯುವತಿಯು ತನ್ನ ಗಂಡನ ಕುಮ್ಮಕ್ಕಿನಿಂದ ಯುವಕರು ತೊಂದರೆ ನೀಡಲು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಬಳಿಕ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಹಸ್ತಅಂತರ ಮಾಡಿದ್ದಾರೆ.3