ಶಂಭೂರಿನಿಂದ ಜೋಗಕ್ಕೆ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ : ಇಬ್ಬರು ಮಕ್ಕಳ ಸಹಿತ ನಾಲ್ವರು ಗಂಭೀರ (A bustravelng from Shambhur – jog, overturned : Four persons includin two childrens were seriously injured)
ಶಂಭೂರಿನಿಂದ ಜೋಗಕ್ಕೆ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ : ಇಬ್ಬರು ಮಕ್ಕಳ ಸಹಿತ ನಾಲ್ವರು ಗಂಭೀರ
(Bantwala) ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಶಂಭೂರಿನಿಂದ ಜೋಗ್ ಫಾಲ್ಸ್‌ಗೆ ಪ್ರವಾಸಕ್ಕೆಂದು ತೆರಳಿದ್ದ ಖಾಸಗಿ ಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರ್ಗಲ್ ಎಂಬಲ್ಲಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಸಂಭವಿಸಿದ್ದು, ಪರಿಣಾಮ ತಲಾ ಇಬ್ಬರು ಮಕ್ಕಳು, ಮಹಿಳೆಯರು ಸೇರಿ ನಾಲ್ವರಿಗೆ ಗಂಭೀರ ಗಾಯಗೊಂಡಿದ್ದು, ಉಳಿದಂತೆ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಸಮೀಪದ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಶಂಭೂರುವಿನಲ್ಲಿರುವ ಶ್ರೀಸಾಯಿ ಮಂದಿರದಿಂದ ಭಾನುವಾರ ಮುಂಜಾನೆ ಜೋಗ್ ಫಾಲ್ಸ್‌ಗೆ ಪ್ರವಾಸ ತೆರಳಿದ್ದ ಖಾಸಗಿ ಬಸ್, ಜೋಗ್ ಫಾಲ್ಸ್ ತಲುಪಲು ಇನ್ನೇನು ಕೆಲವೇ ಕಿ.ಮೀ. ದೂರದ ಕಾರ್ಗಲ್ ಎಂಬಲ್ಲಿ ಈ ಅಪಘಾತ ನಡೆದಿದೆ.
ಶಂಭೂರು ನಿವಾಸಿಗಳಾದ ಯಶೋಧ ಹಾಗೂ ದೀಕ್ಷಿತಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ಇವರ ಜೊತೆಗಿದ್ದ ಇಬ್ಬರು ಪುಟಾಣಿ ಮಕ್ಕಳಿಗೆ ತಲೆ ಹಾಗು ಕಣ್ಣಿನ ಭಾಗಕ್ಕೆ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದೇ ವೇಳೆ ಬಸ್ಸಿನ ಹಿಂಬದಿಯಲ್ಲಿ ಕಾರಿನಿಂದ ತೆರಳುತ್ತಿದ್ದ ಬಂಟ್ವಾಳ ಮೂಲದ ಇಂಜಿನಿಯರ್ ಚೈತ್ರೇಶ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮಾಹಿತಿ ನೀಡಿದ್ದರಲ್ಲದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲೂ ಸಹಕರಿಸಿದರು.
ಘಟನೆಯ ಮಾಹಿತಿ ಪಡೆದ ಶಾಸಕ ರಾಜೇಶ್ ನಾಯ್ಕ್ ಅವರು ಕೂಡಲೇ ಸ್ಪಂದಿಸಿ ಗಾಯಳುಗಳನ್ನು ಅಲ್ಲಿನ ಸಾಗರ ಆಸ್ಪತ್ರೆಗೆ ದಾಖಲಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಶಾಸಕರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರಿಗೂ ಮಾಹಿತಿ ನೀಡಿ ಗಾಯಗಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬೇಕಾದ ಅಂಬ್ಯುಲೆನ್ಸ್ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಶಾಸಕರ ಸೂಚನೆಯಂತೆ ಬಂಟ್ವಾಳದ ಉದ್ಯಮಿ ಉದಯಕುಮಾರ್ ಅವರ ಸಂಬಂಧಿ ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ಗೌಡ ಸಹಿತ ಸದಸ್ಯರು ಗಳಾದ ಬಾಲಸುಬ್ರಹ್ಮಣ್ಯ ಮತ್ತು ಗುರುಸಿದ್ದಪ್ಪ ಅವರು ಸ್ಥಳಕ್ಕೆ ಧಾವಿಸಿ ಸುಮಾರು 10 ಅಂಬ್ಯುಲೆನ್ಸ್ ಮೂಲಕ ಗಾಯಗಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 45 ಮಂದಿ ಜೋಗ್ ಫಾಲ್ಸ್‌ಗೆ ಪ್ರವಾಸ ತೆರಳಿದ್ದರು.