ಸಂವಿಧಾನದ ಬಗೆಗಿನ ಜಾಗೃತಿಗಾಗಿ ಕಾಪುವಿನಲ್ಲಿ ನ. 26ರಂದು ಸಂವಿಧಾನ ಉಳಿಸಿ ಬೃಹತ್ ಜಾಥಾ (Kaup : On 26TH Nov, save the Constitution day at Kaup)
ಸಂವಿಧಾನದ ಬಗೆಗಿನ ಜಾಗೃತಿಗಾಗಿ ಕಾಪುವಿನಲ್ಲಿ ನ. 26ರಂದು ಸಂವಿಧಾನ ಉಳಿಸಿ ಬೃಹತ್ ಜಾಥಾ
(Kaup) ಕಾಪು : ರಕ್ಷಣಾಪುರ ಜವನೆರ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನ. 26 ರಂದು ಕಾಪು ಪೇಟೆಯಲ್ಲಿ ಸಂಜೆ 3 ಗಂಟೆಗೆ ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಶನಿವಾರ ಸಂಜೆ ಕಾಪು ಪತ್ರಿಕಾಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನ. 26 ಡಾ.ಬಿ. ಆರ್. ಅಂಬೇಡ್ಕರ್‌ರವರು ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ದಿನವಾಗಿದೆ. ಸರಕಾರದ ಆದೇಶದಂತೆ ಸಂವಿಧಾನ ದಿನದ ಅಂಗವಾಗಿ ಜನತೆಗೆ ಸಂವಿಧಾನದ ಬಗೆಗಿನ ಜಾಗೃತಿಗಾಗಿ ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.
ಜನರ ಹಕ್ಕುಗಳ ಜಾಗೃತಿಗಾಗಿ, ಸಂವಿಧಾನದ ಮೇಲಿನ ಅಪಸ್ವರಕ್ಕಾಗಿ, ಸಂವಿಧಾನ ಉಳಿಸುವ ಉದ್ದೇಶದಿಂದ ಜಾಥಾದ ಜೊತೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಹಿಂದು, ಮುಸ್ಲಿಂ,ಕ್ರೈಸ್ತ ಧರ್ಮದ ಗುರುಗಳು ಭಾಗವಹಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ನಿಖಿತ್ ರಾಜ್, ಸುಧೀರ್ ಮರೋಳಿ, ಜಯಪ್ರಕಾಶ್ ಹೆಗ್ಡೆ, ದಲಿತ ಮುಖಂಡರಾದ ಸುಂದರ್ ಮಾಸ್ತರ್, ಆನಂದ್ ಬ್ರಹ್ಮಾವರ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.
ಸಂವಿಧಾನ ಬದಲಾಯಿಸುವವರಿಂದ ಸಂವಿಧಾನ ಉಳಿಸಬೇಕಾಗಿದೆ. ಜನರಿಗೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿ, ಆರ್ಥಿಕ ಸ್ವಾತಂತ್ರ್ಯದ ಜೊತೆ ಸಾಮಾಜಿಕ ಸ್ವಾತಂತ್ರ್ಯದ ಮೇಲೆ ಬೆಳಕು ಚೆಲ್ಲುವ ಕಾರ್ಯ ಆಗಬೇಕಾಗಿದೆ. ಅಂದು 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಲ್ಲಿ ಕನಿಷ್ಠ 3 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ. ಸಂವಿಧಾನದ ಅರ್ಪಣೆಯ ದಿನದಂದು ಮೂರು ಸಾವಿರ ಹೆಣ್ಣು ಮಕ್ಕಳಿಗೆ ಕೊಡುಗೆಯಾಗಿ ಸೀರೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶರ್ಫುದ್ದೀನ್ ಶೇಖ್, ಶೇಖರ ಹೆಜಮಾಡಿ, ಉಪಸ್ಥಿತರಿದ್ದರು.