ಸಮಾಜ ಸೇವಕ ಮಾಧವ ಎಸ್. ಸುವರ್ಣ ನಿಧನ (Social worker Madhava S Suvarna Passes away)
ಸಮಾಜ ಸೇವಕ ಮಾಧವ ಎಸ್. ಸುವರ್ಣ ನಿಧನ
ಪಡುಬಿದ್ರಿ: ಸುವರ್ಣ ಸಂಭ್ರಮದ ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಎರ್ಮಾಳು ಮಾಧವ ಎಸ್. ಸುವರ್ಣ(72) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತೆಂಕ ಎರ್ಮಾಳು ಸ್ವಗೃಹ “ಸುರಕ್ಷಾ”ದಲ್ಲಿ ನಿಧನರಾದರು.
ಪರಿಸರದಲ್ಲಿ “ಮಾಸು” ಎಂದೇ ಪ್ರಸಿದ್ಧರಾಗಿದ್ದ ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಸರಳ ಸಜ್ಜನಿಕೆ, ಮೃಧು ಸ್ವಭಾವದ ಅವರು ತೆಂಕ ಎರ್ಮಾಳು ಮೊಗವೀರ ಮಹಾಸಭಾದ ಅಧ್ಯಕ್ಷರಾಗಿ, ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ತೆಂಕ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ, ತೆಂಕ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ತೆಂಕ ಸರಕಾರಿ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಜನನುರಾಗಿಯಾಗಿದ್ದರು.
ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ ಹಲವು ಬಾರಿ ಭಜನಾ ಕಮ್ಮಟಗಳನ್ನು ಯಶಸ್ವಿಯಗಿ ನಡೆಸಿದ್ದರು. ಹಲವು ವರ್ಷಗಳಿಂದ ತೆಂಕ ಗ್ರಾಮದಲ್ಲಿ ನೀಟ್ ಪ್ರಿಂಟ್ ಉದ್ಯಮದ ಮೂಲಕ ಪ್ರಮುಖ ಪ್ರಿಂಟಿಂಗ್ ಪ್ರೆಸ್ ಉದ್ಯಮ ನಡೆಸುತ್ತಿದ್ದರು.
ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಅವರು 1981ಲ್ಲಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಜೆಸಿಐ ರಾಜ್ಯ ತರಬೇತುದಾರರಾಗಿದ್ದ ಅವರು, ಎರಡು ಸಾವಿರಕ್ಕೂ ಅಧಿಕ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಡೆಸಿ ಪ್ರಸಿದ್ಧರಾಗಿದ್ದರು. 20ಕ್ಕೂ ಅಧಿಕ ಜೆಸಿಐ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಗರಿಮೆ ಹೊಂದಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ ಸ್ಥಾಪಕ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.
ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷರಾಗಿ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಪು ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬಳಿಕ ಜಿಪಂ ಸ್ಥಾನಕ್ಕೂ ಸ್ಪರ್ಧಿಸಿದ್ದರು.
ಅವರ ನಿಧನಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಯಶಪಾಲ್ ಎ.ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೇಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎಸ್.ಎರ್ಮಾಳ್, ಪಡುಬಿದ್ರಿ ರೋಟರಿ ಸ್ಥಾಪಕ ಅಧ್ಯಕ್ಷ ವೈ. ಸುಧೀರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಕಾಪು ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.