ಹೆದ್ದಾರಿ ನಿರ್ಲಕ್ಷತೆಯಿಂದ ಅಪಘಾತ ವಲಯವಾಗಿ ಮಾರ್ಪಟ್ಟ ಉಚ್ಚಿಲ ಪೇಟೆ (Uchila City become an accident zone due to Highway neglect)
ಹೆದ್ದಾರಿ ನಿರ್ಲಕ್ಷತೆಯಿಂದ ಅಪಘಾತ ವಲಯವಾಗಿ ಮಾರ್ಪಟ್ಟ ಉಚ್ಚಿಲ ಪೇಟೆ
ಪಡುಬಿದ್ರಿ ಪೊಲೀಸರು ಇತ್ತ ಗಮನಹರಿಸಬೇಕಿದೆ
(Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಡಾಮರೀಕರಣ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ನಿತ್ಯ ನಿರಂತರ ಅಪಘಾತ ಸಂಭವಿಸುತ್ತಿದ್ದು, ಸಾರ್ವಜನಿಕರು ಆತಂಕಿತರಾಗಿದ್ದಾರೆ.
ಪಶ್ಚಿಮ ಬದಿಯ ಡಿವೈಡರ್‌ನಲ್ಲಿ ಕಳೆದ ಒಂದು ವಾರದ ಹಿಂದೆ ರಸ್ತೆಯ ಮೇಲ್ಪದರವನ್ನು ತೆಗೆಯಲಾಗಿತ್ತು. ಆದರೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ತುರ್ತಾಗಿ ಡಾಮರೀಕರಣ ಮಾಡಬೇಕಾದ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿದ್ದಾನೆ.
ಒಂದು ವಾರದಿಂದ ಹೆದ್ದಾರಿಯ ಪೂರ್ವ ಬದಿಯಲ್ಲಿ ಉಡುಪಿ ಕಡೆಗೆ ಮತ್ತು ಮಂಗಳೂರು ಕಡೆಗೆ ಸಾಗಲು ಏಕಮುಖ ರಸ್ತೆಯನ್ನಾಗಿ ಮಾರ್ಪಡು ಮಾಡಲಾಗಿದೆ. ಆದರೆ ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿ, ರಸ್ತೆ ದಾಟಲು ಪರದಾಡಬೇಕಿದೆ. ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಅಪಘಾತಗಳ ಸರಮಾಲೆಯೇ ನಡೆಯುತ್ತಿದೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಪಡುಬಿದ್ರಿ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ನೀಗಿಸಬೇಕಾಗಿದ್ದು, ಪಡುಬಿದ್ರಿ ಪೊಲೀಸರು ಇತ್ತ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಉಚ್ಚಿಲದ ಸಮಸ್ಯೆಗೆ ಶೀಘ್ರ ಪರಿಹಾರವನ್ನು ಸ್ಥಳೀಯರು ಆಶಿಸಿದ್ದಾರೆ.