ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಒಂದು ವರ್ಷಗಳ ಕಾಲ ಗಾನಯಾನ (Ganayana for One year Hebri Chanakya Education and Cultural Foundation)
ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಒಂದು ವರ್ಷಗಳ ಕಾಲ ಗಾನಯಾನ
ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಆಚರಣೆ ರಾಜ್ಯದಲ್ಲೇ ಮೊದಲ ಕಾರ್ಯಕ್ರಮ
(Hebri) ಹೆಬ್ರಿ : ಒಂದು ವರ್ಷಗಳ ಕಾಲ ಉಚಿತವಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸಿದ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರ ಸದ್ದಿಲ್ಲದೇ ಕನ್ನಡ ಸೇವೆ ಮಾಡುತ್ತಿದೆ.
ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ಒಂದಕ್ಕೆ ಸೀಮಿತವಾಗಿರಬಾರದು ಎಂಬ ಉದ್ದೇಶದಿಂದ ನವಂಬರ್ 2023ರ ಕನ್ನಡ ರಾಜ್ಯೋತ್ಸವದಂದು ಹೆಬ್ರಿ ಸರ್ಕಾರಿ ಪ. ಪೂ. ಕಾಲೇಜಿನಲ್ಲಿ ಕನ್ನಡ ಗಾನಯಾನ ವರ್ಷ ಪೂರ್ತಿ ಕನ್ನಡ ಗೀತೆಗಳ ಗಾಯನಕ್ಕೆ ಚಾಲನೆ ದೊರೆಯಿತು. ಅಂದಿನಿಂದ ಇಂದಿನ ತನಕ ಹೆಬ್ರಿ ತಾಲೂಕು ಹಾಗೂ ಸುತ್ತಮುತ್ತಲಿನ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಉತ್ಸವಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಗಾಯಕರಿಂದ ಕನ್ನಡ ಗೀತೆಗಳ ಗಾಯನ ಜನಮನ ಗೆದ್ದಿದೆ.
ಎಲ್ಲೆಲ್ಲಿ ಕಾರ್ಯಕ್ರಮ :
ಹೆಬ್ರಿ ಸರ್ಕಾರಿ ಪ್ರೌಢಶಾಲೆ, ಶಿವಪುರ ಪ್ರಾಥಮಿಕ ಶಾಲೆ, ಕುಚ್ಚೂರು ಸರಕಾರಿ ಪ್ರೌಢಶಾಲೆ, ಶೇಡಿಮನೆ ಸ. ಪ್ರಾ. ಶಾಲೆ, ಸೋಮೇಶ್ವರ ಸ. ಪ್ರಾ. ಶಾಲೆ, ಮುದ್ರಾಡಿ ಸ. ಪ್ರಾ. ಶಾಲೆ, ನೆಲ್ಲಿಕಟ್ಟೆ ಸ. ಪ್ರಾ. ಶಾಲೆ, ಹೆಬ್ರಿ ಸ. ಪ್ರಾ. ಶಾಲೆ, ಹೆಬ್ರಿ ಪ್ರಥಮ ದರ್ಜೆ ಕಾಲೇಜು, ಚಾಣಕ್ಯ ಹೆಬ್ರಿ, ಮೈಟೆಕ್ ಕಾರ್ಕಳ, ನವೋದಯ ವಿದ್ಯಾಲಯ ಚಾರ, ಅಮೃತ ಭಾರತಿ ಪ. ಪೂ ಕಾಲೇಜು, ಶಿವಪುರ ಪಾಂಡುಕಲ್ಲು, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಸೇರಿದಂತೆ ಗಣೇಶೋತ್ಸವ, ನವರಾತ್ರಿ ಉತ್ಸವ, ಜಾತ್ರೆ, ಶಿಬಿರಗಳಲ್ಲಿ ಕನ್ನಡ ಗೀತಾ ಗಾಯನ ಕಾರ್ಯಕ್ರಮ ಆಯೋಜಿಸಿ ಕನ್ನಡದ ಜಾಗೃತಿಯನ್ನು ಮೂಡಿಸುತ್ತಿದೆ.
ವಿವಿಧ ಸಂಘಟನೆಗಳು ಭಾಗಿ :
ಚಾಣಕ್ಯ ಸಂಸ್ಥೆಯ ನೇತೃತ್ವದಲ್ಲಿ ನಡೆದ ಕನ್ನಡ ಗಾನಯಾನದಲ್ಲಿ ತಾಲೂಕು ಆಡಳಿತ ಹೆಬ್ರಿ, ಜೆಸಿಐ ಹೆಬ್ರಿ, ಬೆಳಕು ಚಾರಿಟೇಬಲ್ ಟ್ರಸ್ಟ್ ಶೇಡಿಮನೆ, ಲಯನ್ಸ್ ಕ್ಲಬ್ ಹೆಬ್ರಿ, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುದ್ರಾಡಿ, ಕಸಾಪ ಹೆಬ್ರಿ ಘಟಕ ಮೊದಲಾದ ಸಂಘ ಸಂಸ್ಥೆಗಳು ಪಾಲ್ಗೊಂಡು ಕನ್ನಡ ಗಾಯನದ ಮೆರುಗನ್ನು ಹೆಚ್ಚಿಸಿದರು.
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ :
ಚಾಣಕ್ಯ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಾ ಬಂದಿದೆ.
ಗ್ರಾಮೀಣ ಮಟ್ಟದಲ್ಲಿ ಆರಂಭಗೊಂಡು ಇದೀಗ ರಾಜ್ಯ ಮಟ್ಟದ ತನಕ ಸಂಗೀತ ಸ್ಪರ್ಧೆಗಳನ್ನು ಆಯೋಜಿಸಿ ಪ್ರತಿಭಾನ್ವಿತರನ್ನು ಗುರುತಿಸುತ್ತಿದೆ. ಗಾನಯಾನ ಕಾರ್ಯಕ್ರಮದಲ್ಲಿ ಸ್ಟಾರ್ ಗಾಯಕರನ್ನು ಕರೆದು ಹಾಡಿಸುವ ಬದಲಿಗೆ ಸ್ಥಳೀಯ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಸ್ಟಾರ್ ಗಾಯಕರನ್ನಾಗಿ ಮಾಡುವುದು ಹಾಗೂ ಕನ್ನಡ ಗೀತೆಗಳು ಮೂಲಕ ಕನ್ನಡದ ಜಾಗೃತಿಯನ್ನು ಮೂಡಿಸುವುದು ಈ ಗಾನಯಾನದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದಲ್ಲಿ ಮೊದಲು : ಒಂದು ವರ್ಷದಲ್ಲಿ ತಿಂಗಳಿಗೆ ಎರಡು ಮೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ತೆರಳಿ ಕನ್ನಡ ಗೀತೆಗಳನ್ನು ಸುಮಾರು 2 ಗಂಟೆಗಳ ಕಾಲ ಶಾಲೆಯಲ್ಲಿ ಹಾಡುವುದರ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೆಬ್ರಿಯ ಚಾಣಕ್ಯ ಸಂಸ್ಥೆ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಜನಮನ ಗೆದ್ದ ಕನ್ನಡ ಗಾಯನ:
ಕನ್ನಡ ಚಿತ್ರಗೀತೆಗಳಲ್ಲಿ ಹಳೆಯ ಕನ್ನಡ ಗೀತೆಗಳು, ಭಾವ ಗೀತೆಗಳು, ಜಾನಪದ ಗೀತೆಗಳು ಹಾಗೂ ಭಕ್ತಿ ಗೀತೆಗಳ ಮೂಲಕ ಡಾ. ರಾಜಕುಮಾರ್ ಹಾಡಿರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡಿಗೆ ಹೆಚ್ಚಿನ ಶಾಲೆಯ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ವಿನೂತನ ಕಾರ್ಯಕ್ರಮ :
ಹೆಬ್ರಿ ತಹಶೀಲ್ದಾರ್ ಪ್ರಸಾದ್ ಎಸ್.ಎ ಮಾತನಾಡಿ, ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಬ್ರಿಯ ಚಾಣಕ್ಯ ಸಂಸ್ಥೆ ಕಳೆದ ಒಂದು ವರ್ಷಗಳಿಂದ ಶಾಲಾ ಕಾಲೇಜುಗೆ ತೆರಳಿ ಕನ್ನಡ ಗೀತೆಗಳನ್ನು ಹಾಡುವರು ಮೂಲಕ ಕನ್ನಡದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಯಾರು ಮಾಡದ ವಿನೂತನ ಕನ್ನಡ ಅಭಿಯಾನ ಕಾರ್ಯಕ್ರಮ ಮಾಡಿರುವುದು ನಮ್ಮ ಹೆಬ್ರಿ ತಾಲೂಕಿಗೆ ಹೆಮ್ಮೆ ತಂದಿದೆ ಎಂದರು.
ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ,ಕನ್ನಡ ಅಭಿಮಾನ ಕೇವಲ ದಿನವೊಂದಕ್ಕೆ ಸೀಮಿತವಾಗಿರದೆ ನಿರಂತರವಾಗಿದ್ದಾಗ ಕನ್ನಡವನ್ನ ಉಳಿಸಿ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಕನ್ನಡ ಗೀತಾ ಗಾಯನದ ಮೂಲಕ ಕನ್ನಡದ ಕಂಪನ್ನು ನಾಡಿನಲ್ಲೇ ಪಸರಿಸಬೇಕು ಎನ್ನುವ ಉದ್ದೇಶದಿಂದ ಕೇವಲ ನವಂಬರ್ ತಿಂಗಳಲ್ಲಿ ಮಾತ್ರ ಕಾರ್ಯಕ್ರಮ ಮಾಡಬೇಕು ಎಂದು ಗಾನಯಾನ ಆರಂಭ ಮಾಡಿದೆ. ಹೆಬ್ರಿ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ ಆಗುತ್ತಿರುವಾಗ ಉದ್ಯಮಿ ಸತೀಶ್ ರೈ ಅವರು ಕನ್ನಡ ಗೀತಾ ಗಾಯನವನ್ನು ವರ್ಷವಿಡಿ ಮಾಡಿ ಎಂದು ಸಲಹೆಯನ್ನು ನೀಡಿದ ಹಿನ್ನೆಲೆಯಲ್ಲಿ ಇಂದು ವರ್ಷವಿಡಿ ಕನ್ನಡದ ಜಾಗೃತಿ ಮೂಡಿಸಿರುವ ಹೆಮ್ಮೆ ನಮಗಿದೆ.
ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಶಾಲಾ ಕಾಲೇಜುಗಳಿಗೆ ಕನ್ನಡ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎನ್ನುತ್ತಾರೆ ಉದಯ ಕುಮಾರ್ ಹೆಬ್ರಿ.