ಪಡುಬಿದ್ರಿ ಹೆದ್ದಾರಿಯಲ್ಲಿ ಅವೈಜ್ಞಾನಿಕ ಮರು ಡಾಮರೀಕರಣದಿಂದಾಗಿ ಅಪಘಾತಗಳ ಸರಮಾಲೆ, ಹಲವರ ಸಾವು (Unscientific re -tarring of Padubidri Highway leads to spate of accidenţs many dies)
ಪಡುಬಿದ್ರಿ ಹೆದ್ದಾರಿಯಲ್ಲಿ ಅವೈಜ್ಞಾನಿಕ ಮರು ಡಾಮರೀಕರಣದಿಂದಾಗಿ ಅಪಘಾತಗಳ ಸರಮಾಲೆ, ಹಲವರ ಸಾವು
(Padubidri) ಪಡುಬಿದ್ರಿ: ಪಡುಬಿದ್ರಿ, ಎರ್ಮಾಳು, ಉಚ್ಚಿಲ ಹಾಗೂ ಕಾಪು ಪರಿಸರದಲ್ಲಿ ಅವೈಜ್ಞಾನಿಕ ಮರು ಡಾಮರೀಕರಣದಿಂದಾಗಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಹಲವಾರು ಜನರು ಪ್ರಾಣ ಕಳೆದುಕೊಂಡು, 20ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಅಂಗವೂನಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಚ್ಚಿಲದಲ್ಲಿ ಸರಿ ಸುಮಾರು 20ಕ್ಕೂ ಅಧಿಕ ಅಪಘಾತ ಸಂಭವಿಸಿ, ಇಬ್ಬರು ಪ್ರಾಣ ಕಳೆದುಕೊಂಡು 10ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರ್ಮಾಳಿನಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಡುಬಿದ್ರಿಯಲ್ಲಿ ಕೇವಲ 4 ದಿನದಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡು, ಓರ್ವ ಅಸುನೀಗಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಉತ್ತಮ ಸ್ಥಿತಿಯಲ್ಲಿದ್ದ ಹೆದ್ದಾರಿಯನ್ನು ಅಗೆದು ಮರು ಡಾಮರೀಕರಣ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿದೆ. ಹೆದ್ದಾರಿಯು ಉತ್ತಮವಾಗಿದೆ. ಇದರ ಮೇಲ್ಪದರವನ್ನು ಕಿತ್ತು ತೆಗೆದು ಮರು ಡಾಮರೀಕರಣ ಯಾಕೆ ಮಾಡುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಹೆದ್ದಾರಿಯ ಒಂದು ಪಾರ್ಶ್ವವನ್ನು ರದ್ದು ಮಾಡಿ, ಮತ್ತೊಂದು ಪಾರ್ಶ್ವದಲ್ಲಿ ಉಡುಪಿ ಕಡೆ ಮತ್ತು ಮಂಗಳೂರು ಕಡೆಗೆ ವಾಹನಗಳನ್ನು ಬಿಡಲಾಗುತ್ತಿದೆ. ಇದರಿಂದ ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ.
ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನರವರು (ಟ್ರಾಫಿಕ್ ಸಮಸ್ಯೆ ನೀಗಿಸಲು ಸ್ವತ: ಫೀಲ್ಡಿಗೆ Padubidri SI Prasanna) ಇಳಿದಿದ್ದು, ಪಡುಬಿದ್ರಿ ಹೆದ್ದಾರಿಯಲ್ಲಿ ಟ್ರಾಫಿಕ್ ಸುವ್ಯವಸ್ಥೆ ಕಾಪಾಡುವುದು ಸುಲಭದ ಮಾತಲ್ಲ. ಕಾರ್ಕಳ ರಸ್ತೆಯಿಂದ, ಉಡುಪಿ, ಮಂಗಳೂರು ಕಡೆಯಿಂದ ನಿರಂತರ ವಾಹನಗಳು ಬರುತ್ತದೆ. ಘನ ವಾಹನಗಳು ಟ್ರಾಫಿಕ್ ನಲ್ಲಿ ಸವಾಲಾಗಿದ್ದು, ಪೊಲೀಸರು ಮತ್ತು ಹೋಂ ಗಾರ್ಡ್ಸ್ ಹೆಣಗಾಡುತ್ತಿರುವುದು ಕಂಡುಬರುತ್ತದೆ.
ಪಡುಬಿದ್ರಿಯ ಪೂರ್ವ ಬದಿಯ ಮತ್ತು ಪಶ್ಚಿಮ ಬದಿಯ ಸರ್ವೀಸ್ ರಸ್ತೆಯನ್ನು ಅಲ್ಲಿಯ ಹೊಟೇಲು, ಅಂಗಡಿ ಮಾಲೀಕರು ಆಕ್ರಮಿಸಿಕೊಂಡಿದ್ದು, ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣವಾಗಿದೆ. ಇಬ್ಬದಿಯ ಸರ್ವಿಸ್ ರಸ್ತೆಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ಸ್ವಲ್ಪ ಮಟ್ಟಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗೆ ಇನ್ನೆಷ್ಟು ಜನರು ಪ್ರಾಣ ತ್ಯಜಿಸಬೇಕಾಗಿದೆಯೋ ಎನ್ನುವುದು ಕಾಲವೇ ನಿರ್ಣಯಸಬೇಕಿದೆ.