ಪಿಲಿಕುಲ ಮೃಗಾಲಯದಲ್ಲಿ ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ “ರಾಣಿ” (Birth of two cubs at Pilikula Zoo)
ಪಿಲಿಕುಲ ಮೃಗಾಲಯದಲ್ಲಿ ಎರಡು ಹುಲಿ ಮರಿಗಳಿಗೆ ಜನ್ಮ ನೀಡಿದ “ರಾಣಿ”
(Mangaluru) ಮಂಗಳೂರು : ಪಿಲಿಕುಲ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಹುಲಿ “ರಾಣಿ” ಎರಡು ಮರಿಗಳಿಗೆ ಜನ್ಮ ನೀಡಿದೆ.
ರಾಣಿಯು 2016 ರಲ್ಲಿ ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿ ದಾಖಲೆ ರಚಿಸಿತ್ತು. ನಂತರ 2021 ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತು. ತಾರೀಕು 20.12.2024 ರಂದು ರಾತ್ರಿ ಎರಡು ಮರಿಗಳಿಗೆ ಜನ್ಮ ನೀಡಿದೆ.
ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ. ಮೃಗಾಲಯದ ಅಧಿಕಾರಿಗಳು ವಿಶೇಷ ಗಮನವನ್ನು ನೀಡುತ್ತಿದ್ದಾರೆ.
“ರಾಣಿ” ಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಬನ್ನೇರುಘಟ್ಟ ಮೃಗಾಲಯದಿಂದ ತರಲಾಗಿದ್ದು, ಪಿಲಿಕುಲ ಮೃಗಾಲಯದಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು.
ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 10 ಕ್ಕೆ ಏರಿದೆ. ಪ್ರಕೃತ 4 ಗಂಡು ಮತ್ತು 4 ಹೆಣ್ಣು ಹುಲಿಗಳಿದ್ದು, ಮರಿಗಳ ಲಿಂಗವನ್ನು ಎರಡು ತಿಂಗಳ ನಂತರ ಪ್ತತೆ ಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಣಿಗೆ ಅಗತ್ಯ ಆಹಾರ ಮತ್ತು ಪೂರಕ ಆಹಾರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಹುಲಿ ಮರಿಗಳಿಗೆ ಒಂದುವರೆ ತಿಂಗಳ ನಂತರ ರೋಗ ನಿರೋಧಕ ಲಸಿಕೆಯನ್ನು ನೀಡಲಾಗುವುದು. ಆ ತನಕ ಮರಿಗಳ ಆರೋಗ್ಯವು ಅತೀ ಸೂಕ್ಷ್ಮವಾಗಿರುವುದರಿಂದ ತುಂಬಾ ನಿಗಾ ವಹಿಸಬೇಕಾಗಿದೆ.
ಅಗತ್ಯ ಸಿಬ್ಬಂದಿಗಳನ್ನು ಹೊರತು ಪಡಿಸಿ ಹುಲಿಗಳ ಮನೆಯ ಸಮೀಪಕ್ಕೆ ಯಾರೂ ಪ್ರವೇಶಿಸದಂತೆ ಆದೇಶವನ್ನು ನೀಡಲಾಗಿದೆ.