ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ‘ಕ್ರಿಸ್ಮಸ್ ’ ಆಚರಣೆ (Celebartion of christmas in Udupi Dist)
ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ‘ಕ್ರಿಸ್ಮಸ್ ’ ಆಚರಣೆ
(Udupi) ಉಡುಪಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಕ್ರೈಸ್ತರು ಮಂಗಳವಾರ ರಾತ್ರಿಯೇ ಸಮೀಪದ ಚರ್ಚುಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೇಹಿತರು, ಬಂಧು ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆಯ ಸಮಯವಾಗಿದ್ದು ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ದೀನನಾಗಿ ಜನಿಸಿದ ಪ್ರಭು ಯೇಸುವಿನ ಜನನ, ದೇವರು ನಮ್ಮ ಮೇಲಿರಿಸಿದ ಪ್ರೀತಿ ಸ್ಮರಣೆಯಾಗಿದೆ ದ್ವೇಷ, ಕಲಹ ವಿಭಜನೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ನಲುಗಿದ ಜಗತ್ತಿಗೆ ಕ್ರಿಸ್ತ ಜಯಂತಿಯ ಸಂದೇಶವು ದೇವರ ಅಪರಿಮಿತಿ ಪ್ರೀತಿ ಮತ್ತು ನಿರಂತರ ಪ್ರಸನ್ನತೆಯ ಪ್ರತೀಕವಾಗಿದೆ.
ಪರರ ಪ್ರೀತಿಸಲು ಮತ್ತು ಕಾಳಜಿ ವಹಿಸಲು ಪ್ರಭುವಿನ ಮಧುರ ಕರೆಯನ್ನು ನೆನಪಿಸುತ್ತದೆ. ಪ್ರೀತಿ, ಕರುಣೆ ಮತ್ತು ಶಾಂತಿಯ ಮೌಲ್ಯಗಳು ಜಗತ್ತಿನಲ್ಲಿ ಮೈಲುಗೈ ಸಾಧಿಸಿ, ಸಹಾನುಭೂತಿಯ ಮತ್ತು ನ್ಯಾಯಯುತ ಸಮಾಜದ ನಿರ್ಮಾಣದಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಳ್ಳಲು ಕ್ರಿಸ್ತಜಯಂತಿಯ ಸುದಿನ ಭರವಸೆಯ ದೀಪವಾಗಿದೆ. ಕ್ರಿಸ್ತನ ಬೆಳಕು ನಮ್ಮ ದೈನಂದಿನ ಬದುಕಿನಲ್ಲಿ ಮಾರ್ಗದರ್ಶಿಯಾಗಿರಲಿ. ನಮ್ಮ ಮನೆ ಮನಗಳನ್ನು ಶಾಂತಿಯಿಂದ ನಮ್ಮ ಸಮುದಾಯಗಳನ್ನು ಸಾಮರಸ್ಯದಿಂದ ತುಂಬಲಿ ಎಂದರು.
ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ. ಪ್ರದೀಪ್ ಕಾರ್ಡೋಜಾ, ವಂ. ಡಾ. ಜೆನ್ಸಿಲ್ ಆಳ್ವಾ, ಪಿಲಾರ್ ಸಭೆಯ ವಂ. ಮನೋಜ್ ಫುರ್ಟಾಡೊ, ವಂ. ಪರೇಲ್ ಫೆರ್ನಾಂಡಿಸ್, ಹೋಲಿ ಕ್ರಾಸ್ ಹೋಮ್ ಕಟಪಾಡಿ ಮುಖಸ್ಥರಾದ ವಂ.ರೋನ್ಸನ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು. ಚರ್ಚ್‌ಗಳು ವಿದ್ಯುತ್ ದೀಪಾಲಂಕಾರ, ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಯೇಸುವಿನ ಜನ್ಮದಿನದ ಪ್ರಯುಕ್ತ ಮಾಡಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ಗೋದಲಿಯಲ್ಲಿ ಪುಟ್ಟ ಗೊಂಬೆಗಳ ಮೂಲಕ ಪ್ರದರ್ಶಿಸಲಾಯಿತು.
ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು.
ಜಿಲ್ಲೆಯ ಪ್ರಮುಖ ಚರ್ಚುಗಳಾದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಧರ್ಮಗುರು ವಂ. ಡೆನಿಸ್ ಡೆಸಾ, ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ವಂ. ಸುನೀಲ್ ಡಿಸಿಲ್ವಾ, ಉಡುಪಿ ಶೋಕಮಾತಾ ಚರ್ಚಿನಲ್ಲಿ ವಂ.ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು.
ಬುಧವಾರ ಮನೆಯಲ್ಲಿ ಹಬ್ಬದಡುಗೆಯನ್ನು ಮಾಡಿ ತಮ್ಮ ಸ್ನೇಹಿತರು, ನೆರೆ ಹೊರೆಯವರೊಂದಿಗೆ ಸವಿಯುವುದರೊಂದಿಗೆ ಕ್ರಿಸ್ಮಸ್ ಸಿಹಿತಿಂಡಿ ಕುಸ್ವಾರ್ ಹಂಚಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡರು