# Tags
#ನಿಧನ

ಖ್ಯಾತ ಸಿನೆಮಾ ನಿರ್ದೇಶಕ, ಪದ್ಮಭೂಷಣ ಸಮ್ಮಾನಿತ ಶ್ಯಾಂ ಬೆನಗಲ್‌ ನಿಧನ (Famous motion film Director Sham Benegal passes away)

ಖ್ಯಾತ ಸಿನೆಮಾ ನಿರ್ದೇಶಕ, ಪದ್ಮಭೂಷಣ ಸಮ್ಮಾನಿತ ಶ್ಯಾಂ ಬೆನಗಲ್ನಿಧನ

 (Mumbai) ಮುಂಬಯಿ: ಸಾಮಾಜಿಕ ಕಳಕಳಿಯ ಸಿನಿಮಾ ನಿರ್ದೇಶಕ ಎಂದೇ ಖ್ಯಾತಿ ಪಡೆದ ಖ್ಯಾತ ಸಿನೆಮಾ ನಿರ್ದೇಶಕ ಶ್ಯಾಂ ಬೆನಗಲ್‌ (90)ರವರು ಸೋಮವಾರ ಮುಂಬಯಿಯಲ್ಲಿ ವಿಧಿವಶರಾಗಿದ್ದಾರೆ.

ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ವೋ ಕಾರ್ಡ್‌ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಡಿ. 14­ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ ಪಿಯಾ ಬೆನೆಗಲ್‌ ಅವರು ಹೇಳಿದ್ದಾರೆ.

18 ರಾಷ್ಟ್ರೀಯ ಪ್ರಶಸ್ತಿಗಳು: ನೈಜವಾಗಿ ಕಥೆ ಹೇಳುವಿಕೆ ಮತ್ತು ಸಾಮಾಜಿಕ ಒಳನೋಟಗಳನ್ನೊಳಗೊಂಡ ಸಿನೆಮಾಗಳನ್ನು ನಿರ್ಮಾಣ ಮಾಡುವ ಮೂಲಕ ಶ್ಯಾಂ ಬೆನೆಗಲ್‌ ಅವರು ಪ್ರಸಿದ್ಧಿ ಪಡೆದಿದ್ದರು. ಇದಕ್ಕಾಗಿ ಅವರು 18 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

  ಅಲ್ಲದೇ 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರ ಅವರನ್ನು ಗೌರವಿಸಿದೆ. 2005ರಲ್ಲಿ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.

ಶ್ಯಾಂ ಬೆನೆಗಲ್‌ರವರು ಮಂಡಿ, ಅಂಕುರ್‌, ನಿಶಾಂತ್‌, ಮಂಥನ್‌, ಭೂಮಿಕಾ, ಮಮ್ಮೋ, ಸರ್ದಾರಿ ಬೇಗಂ ಮತ್ತು ಜುಬೇದಾ ಸಿನೆಮಾಗಳಿಗಾಗಿ ಹೆಸರುವಾಸಿಯಾಗಿದ್ದಾರೆ.

 ಶ್ಯಾಮ್‌ ಬೆನಗಲ್‌ ಅವರ ತಂದೆ ಶ್ರೀಧರ ಬಿ. ಬೆನಗಲ್‌ಅವರು ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಬೆನಗಲ್‌ನವರು. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇವರ ಮೂಲ ನಾಗಬನ ಬೆನಗಲ್‌ನಲ್ಲಿದೆ. ಇಂದಿಗೂ ಶ್ಯಾಮ್‌ ಬೆನಗಲ್‌ ಕುಟುಂಬಸ್ಥರು ಮೂಲಸ್ಥಾನಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಶ್ಯಾಮ್‌ ಬೆನಗಲ್‌ ಇಲ್ಲಿಗೆ ಆಗಮಿಸಿದ್ದರು ಎಂದು ಸ್ಥಳೀಯರು ನೆನಪಿಸುತ್ತಾರೆ.

ಹಲವು ವರ್ಷಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಪ್ರಶ್ನಾ ಚಿಂತನೆಯಂತೆ ಬೆನಗಲ್‌ ಅವರು ಕುಟುಂಬದವರ ಜತೆ ತಮ್ಮ ಮೂಲ ನಾಗಬನಕ್ಕೆ ಆಗಮಿಸಿ ಆಶ್ಲೇಷಾ ಸೇವೆ ಸಲ್ಲಿಸಿದ್ದರು. ಅನಂತರದಿಂದ ಪ್ರತೀ ವರ್ಷ ಕುಟುಂಬದವರಿಂದ ಸೇವೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಿರೀಶ್‌ ಕಾರ್ನಾಡ್‌ ಅವರು ನಿರ್ದೇಶನದ ಹಿಂದಿ ಚಿತ್ರವೊಂದರ ಚಿತ್ರೀಕರಣ ಉಡುಪಿ – ಕುಂದಾಪುರದಲ್ಲಿ ನಡೆದಿತ್ತು. ಆ ವೇಳೆ ಶ್ಯಾಮ್‌ ಬೆನಗಲ್‌ ಅವರು ಉಡುಪಿಗೆ ಬಂದಿದ್ದರು. 1984ರ ಉತ್ಸವ್‌ ಸಿನೆಮಾದ ಚಿತ್ರೀಕರಣದ ಸಂದರ್ಭ ಬಂದಿದ್ದಾರೆ ಎನ್ನಲಾಗಿದೆಯಾದರೂ ಈ ಬಗ್ಗೆ ಯಾರಲ್ಲೂ ಖಚಿತವಾದ ಮಾಹಿತಿ ಇಲ್ಲ.

ಅನಂತ್ನಾಗ್ಜೊತೆ ಹಿಂದಿ ಸಿನೆಮಾ

ಕನ್ನಡದ ಹಿರಿಯ ನಟ ಅನಂತ್‌ನಾಗ್‌‍ ಅಭಿನಯದಲ್ಲಿ ಹಲವು ಚಿತ್ರಗಳ ನಿರ್ದೇಶನ ಮಾಡುವ ಮೂಲಕ ಅನಂತ್‌ನಾಗ್‌ ಅವರನ್ನು ಹಿಂದಿಯಲ್ಲಿ ಪರಿಚಯಿಸಿದ ಖ್ಯಾತಿ ಕೂಡಾ ಬೆನಗಲ್‌ ಅವರದ್ದು. ಅಂಕುರ್‌, ನಿಶಾಂತ್‌‍, ಮಂಥನ್‌‍, ಭೂಮಿಕಾ, ಕೊಂಡೂರಾ, ಕಲಿಯುಗ್‌‍ ಮುಂತಾದ ಶ್ಯಾಮ್‌‍ ಬೆನೆಗಲ್‌‍ ನಿರ್ದೇಶನದ ಚಿತ್ರಗಳಲ್ಲಿ ಅನಂತ್‌ ನಾಗ್‌‍ ಅಭಿನಯಿಸಿದ್ದಾರೆ. ಅನಂತ್‌ನಾಗ್‌ ಅವರ ಮೊದಲ ಹಿಂದಿ ಚಿತ್ರ ಅಂದಿನ ಕಾಲಕ್ಕೆ ಸಾಕಷ್ಟು ಬೋಲ್ಡ್ ದೃಶ್ಯಗಳನ್ನು ಹೊಂದಿ, ಆ ಕಾಲಕ್ಕೆ “ಮುಂದುವರಿದ ಚಿತ್ರ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಚಿತ್ರ 3 ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಅನಂತ್‌ ನಾಗ್‌ ಹಾಗೂ ಬೆನಗಲ್‌ ಜೋಡಿಯ ಕೊನೆಯ ಚಿತ್ರ “ಕಲಿಯುಗ್‌”. ಈ ಸಿನೆಮಾ ಮಹಾಭಾರತದ ಆಧುನಿಕ ರೂಪವಾಗಿತ್ತು.

ಹಾಲಿನ ಕ್ರಾಂತಿ ಕುರಿತಾದ ಮಂಥನ ಚಿತ್ರ ಮೊದಲು ಸಾಕ್ಷ್ಯ ಚಿತ್ರವಾಗಿತ್ತು. ಗುಜರಾತ್‌ ಹಾಲು ಉತ್ಪಾದಕರ ಸಂಘದ 5 ಲಕ್ಷ ಮಂದಿ ಸದಸ್ಯರು 2 ರೂಪಾಯಿಯಂತೆ ಹಾಕುವ ಮೂಲಕ ನಿರ್ಮಾಣಕ್ಕೆ ಸಾಥ್‌ ನೀಡಿದ್ದರು.

 ಕಂಬನಿ ಮಿಡಿದ ಗಣ್ಯರು : ಶ್ಯಾಂ ಬೆನೆಗಲ್‌ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್,   ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನವೀನ್‌ ಪಟ್ನಾಯಕ್‌ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2