# Tags
#ಸಂಘ, ಸಂಸ್ಥೆಗಳು

  ಡಿ. 29 : ಶಂಕರಪುರದಲ್ಲಿ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024 – 25 (Dec. 29 : Rotary Community Disrict Coference 2024 – 25 at Shankarpura)

   ಡಿ. 29 : ಶಂಕರಪುರದಲ್ಲಿ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024 – 25

   (Kaup) ಕಾಪು : ರೋಟರಿ ಕ್ಲಬ್ ಶಿರ್ವ ಮತ್ತು ರೋಟರಿ ಸಮುದಾಯದಳ ಪಾದೂರು ಇದರ ಆಶ್ರಯದಲ್ಲಿ ಒಂದು ದಿನದ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024-25 “ಬೆಸುಗೆ” ಡಿ.29, ರವಿವಾರ ಶಂಕರಪುರ ಸೈಂಟ್ ಜೋನ್ಸ್ ಶಾಲಾ ಸಭಾಂಗಣದಲ್ಲಿ ಜರುಗಲಿದೆ ಎಂದು ರೋಟರಿ ಸಮುದಾಯದಳದ ಜಿಲ್ಲಾ ಛೆರ್ಮನ್ ಬಿ. ಪುಂಡಲೀಕ ಮರಾಠೆ ತಿಳಿಸಿದರು.

ಅವರು ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

 ಶಿರ್ವ ರೋಟರಿಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಶಿಕ್ಷಣ ತಜ್ಞರು, ಕೃಷಿ ಪಂಡಿತರು, ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರು, ಬಹುಮುಖ ಪ್ರತಿಭಾ ಸಂಪನ್ನರು, ಶಂಕರಪುರ, ಕಾಪು ರೋಟರಿಯ ಪ್ರವರ್ತಕರು, ರೋಟರಿ ಸಮುದಾಯ ದಳದ ಚಿಂತನೆಗೆ ಆರಂಭದಲ್ಲಿಯೇ ಸ್ಪೂರ್ತಿ ತುಂಬಿದ “ರೋಟರಿ ಭೀಷ್ಮ” ಖ್ಯಾತಿಯ ದಿ.ರೊ. ಪಾಂಗಾಳ ವಿಠಲ ಶೆಣೈರವರ ಜನ್ಮ ಶತಮಾನೋತ್ಸವದ ಸವಿ ನೆನಪಿನಲ್ಲಿ ಸಮ್ಮೇಳನ ಸಂಪನ್ನಗೊಳ್ಳಲಿದೆ.

 ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ನಾಲ್ಕು ಕಂದಾಯ ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನು ಒಳಗೊಂಡಿದ್ದು, 35ಕ್ಕೂ ಅಧಿಕ ರೋಟರಿ ಸಮುದಾಯದಳ ಘಟಕಗಳಿಂದ ಅಂದಾಜು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಕಾರ್ಯಕ್ರಮಗಳು ಬೆಳಿಗ್ಗೆ 9:15 ರಿಂದ ಸಂಜೆ 4ರವರೆಗೆ ಜರಗಲಿವೆ.

 ಪೂರ್ವಾಹ್ನ ರೋ.ಅ. ಜಿಲ್ಲೆ. 3182 ಇದರ ಜಿಲ್ಲಾ ಗವರ್ನರ್ ರೊ. ದೇವಾನಂದ್‌ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯರಾದ  ರೋಟರಿ ಜಿಲ್ಲಾ 1986-87ನೇ ಸಾಲಿನ ಗವರ್ನರ್ ಡಾ. ಆರ್.ಡಿ. ಪ್ರಭು ಉಪಸ್ಥಿತರಿರುವರು.

ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಅಧ್ಯಕ್ಷತೆ ವಹಿಸಲಿದ್ದು, ಶಂಕರಪುರ ಸೈಂಟ್ ಜೋನ್ಸ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಡಾ. ಪ್ರಕಾಶ್ ಅನಿಲ್ ಕೆಸ್ತಲಿನೊ ಆಶೀರ್ವಚನ ನೀಡಲಿರುವರು.

 ದಿಕ್ಸೂಚಿ ಭಾಷಣವನ್ನು ಜಿಲ್ಲಾ ಮಾಜಿ ಗವರ್ನರ್ ಡಾ. ದೇವದಾಸ್ ರೈ ಮಂಗಳೂರು ನೆರವೇರಿಸಲಿದ್ದಾರೆ.

  ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾ ಇದರ ನಿವೃತ್ತ ಡಿಜಿಎಮ್ ಪಾಂಗಾಳ ಜಯರಾಮ ಶೆಣೈ, ಜಿಲ್ಲಾ ನಿಯೋಜಿತ ಜಿಲ್ಲಾ ಗವರ್ನರ್ ಪಾಲಾಕ್ಷ ಹಾಸನ, 2026-27ನೇ ಸಾಲಿನ ಜಿಲ್ಲಾ ಗವರ್ನರ್ ಬಿ. ಎಮ್.ಭಟ್ ಬ್ರಹ್ಮಾವರ, ರೋಟರಿ ಸಮುದಾಯದಳದ ಜಿಲ್ಲಾ ಛೆರ್ಮನ್ ಬಿ. ಪುಂಡಲೀಕ ಮರಾಠೆ, ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ ಶಂಕರಪುರ, ಸಮುದಾಯದಳದ ವೈಸ್ ಛೇರ್ಮನ್ ಶ್ರೀಹರ್ಷ ಹರಿಹರಪುರ, ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಪಾದೂರು, ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಪಾದೂರು ಆರ್‌ಸಿಸಿ ಪ್ರತಿನಿಧಿ ಪ್ರಕಾಶ್ ಆಚಾರ್ಯ ಭಾಗವಹಿಸುವರು.

 ಸಮ್ಮೇಳನದಲ್ಲಿ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ ಪಾಂಬೂರು ಇವರಿಂದ ಕಲಾ ಪ್ರಸ್ತುತಿ, ಮೂರು ಪ್ರಧಾನಗೋಷ್ಠಿಗಳು ನಡೆಯಲಿದ್ದು, “ಸೇವಾಹೀ ಪರಮೋ ಧರ್ಮ:” ಸಂಪನ್ಮೂಲವ್ಯಕ್ತಿಗಳಾಗಿ ಶಿಕ್ಷಕರು ಹಾಗೂ ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, “ಯುವಜನತೆ ಮತ್ತು ಕೃಷಿ ಜೀವನ ಶೈಲಿ” ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, “ಮಿರಾಕಲ್ ಫಾರೆಸ್ಟ್ ಚಾಲೆಂಜ್” ಸಮಾಜ ಸೇವಕರಾದ ಮಹೇಶ್ ಶೆಣೈ ಕಟಪಾಡಿ ಮಾತನಾಡುವರು.

  ಅಪರಾಹ್ನ “ಸಾಂಸ್ಕೃತಿಕ ಪ್ರತಿಭಾ ಸ್ಫರ್ಧಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಆರ್‌ಸಿಸಿ ಕಲಾ ತಂಡಗಳಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ.

  ಸಮಾರೋಪ ಸಮಾರಂಭದಲ್ಲಿ  ಜಿಲ್ಲಾ ಗವರ್ನರ್ ದೇವಾನಂದ್‌, ಮಾಜಿ ಜಿಲ್ಲಾ ಗವರ್ನರ್ ಜ್ಞಾನವಸಂತ ಶೆಟ್ಟಿ ಬ್ರಹ್ಮಾವರ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಉಡುಪಿ, ರೋಟರಿ ಜಿಲ್ಲಾ ಕಾರ್ಯದರ್ಶಿ (ಆಡಳಿತ)  ಐರೋಡಿ ರಾಮದೇವ ಕಾರಂತ ಭಾಗವಹಿಸುವರು. ಸ್ಫರ್ಧಾ ವಿಜೇತರಿಗೆ ಟ್ರೋಫಿ, ನಗದು ಪುರಸ್ಕಾರದೊಂದಿಗೆ ಅರ್ಹತಾ ಪತ್ರ ನೀಡಲಾಗುವುದು.

 ಪಾಂಗಾಳ ವಿಟ್ಠಲ ಶೆಣೈ ಸ್ಮಾರಕ “ಸಾಧನಾ-ಪ್ರೇರಣಾ ಪುರಸ್ಕಾರ”

 ಪಾಂಗಾಳ ವಿಟ್ಠಲ ಶೆಣೈಯವರು ಶಿಕ್ಷಣ, ಕೃಷಿ,ಸಾಹಿತ್ಯ, ಜನಪದ, ರಂಗಭೂಮಿ, ಸಮಾಜಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು.  ಇದೇ ಆಶಯವನ್ನಿರಿಸಿಕೊಂಡು ಪಾಂಗಾಳ ವಿಠಲ ಶೆಣೈ ಅವರಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಬಯಸದೆ ಸೇವೆ ಸಲ್ಲಿಸುತ್ತಿರುವ ಒಬ್ಬರಿಗೆ ಪ್ರತೀ ಸಮ್ಮೇಳನದಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯ ಅರ್ಹರನ್ನು ಗುರುತಿಸಿ  ಗೌರವಿಸುವ ಪಾಂಗಾಳ ವಿಠಲ ಶೆಣೈ ಸ್ಮಾರಕ “ಸಾಧನಾ-ಪ್ರೇರಣಾ ಪುರಸ್ಕಾರ ಪ್ರದಾನಿಸಲಾಗುವುದು.

 ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ, ಕೃಷಿಕ, ಬರಹಗಾರ ಕೃಷ್ಣಕುಮಾರ್ ರಾವ್ ಮಟ್ಟು ಅವರನ್ನು ಈ ಬಾರಿಯ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

  ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಸಭಾಪತಿ ಡಾ. ವಿಠಲ್ ನಾಯಕ್, ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಪಾದೂರು, ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ, ಪಾದೂರು ರೋಟರಿ ಸಮುದಾಯ ದಳದ ಸಭಾಪತಿ ಜಯಕೃಷ್ಣ ಆಳ್ವ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2