# Tags
#ರಾಜಕೀಯ #ವ್ಯವಹಾರ

ಮುಲ್ಕಿ ನಗರ ಪಂಚಾಯತ್ ಸಭೆ : “ಮಟ್ಕಾ” ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮನವಿ (Mulki Nagar Panchayat meeting: Appeal to police officers to put a stop to the “matka” racket)

ಮುಲ್ಕಿ ನಗರ ಪಂಚಾಯತ್ ಸಭೆ : ಮಟ್ಕಾ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮನವಿ

 (Mulki) ಮುಲ್ಕಿ: ನಗರ ಪಂಚಾಯತ್ ಸಭೆ ಅಧ್ಯಕ್ಷ ಸತೀಶ್ ಅಂಚನ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಸದಸ್ಯ ಮಂಜುನಾಥ ಕಂಬಾರ್ ಮಾತನಾಡಿ, ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಪೋಲೀಸ್ ಅಧಿಕಾರಿಗಳಿಗೆ ಹಫ್ತಾ ಹೋಗುತ್ತಿರುವುದರಿಂದ ದಂಧೆ ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ಜನ ಆರೋಪಿಸುತ್ತಿದ್ದು, ಕೂಡಲೇ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಶಾಲಾ ಕಾಲೇಜುಗಳ ಬಳಿ ರಸ್ತೆದಾಟಲು ಪೊಲೀಸರ ನಿಯೋಜನೆ, ಬೈಕ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ತ್ರಿಬಲ್ ರೈಡ್ ಮೂಲಕ ಅತಿ ವೇಗದಲ್ಲಿ ಅಪಾಯಕಾರಿ ಪ್ರಯಾಣದ ನಿಯಂತ್ರಣ ಬಗ್ಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ ಶೆಟ್ಟಿ ಹಾಗೂ ಸದಸ್ಯ ಲೋಕೇಶ್ ಕೋಟ್ಯಾನ್ ಪೊಲೀಸರಿಗೆ ಸೂಚನೆ ನೀಡಿದರು

 ನ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಸದಸ್ಯ ಯೋಗೀಶ್ ಕೋಟ್ಯಾನ್ ಕಂದಾಯ ಇಲಾಖೆಗೆ ವಿನಂತಿಸಿದರು.

ಮುಲ್ಕಿ ತಾಲೂಕು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

ನ. ಪಂ. ಸಭೆಗೆ ಆರೋಗ್ಯ ಸಹಿತ ವಿವಿಧ ಇಲಾಖೆಯ ಗೈರು ಬಗ್ಗೆ ಸದಸ್ಯ ಬಾಲಚಂದ್ರ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು

ಮುಲ್ಕಿ ರೈಲ್ವೇ ನಿಲ್ದಾಣದಲ್ಲಿ ಇನ್ನೊಂದು ಫ್ಲಾಟ್ ಫಾರ್ಮ್ ನ ಅವಶ್ಯಕತೆ, ನಿಲ್ದಾಣಕ್ಕೆ ಹೋಗುವ ರಸ್ತೆ ದುರಸ್ತಿ ಬಗ್ಗೆ ಸದಸ್ಯ ಯೋಗೀಶ್ ಕೋಟ್ಯಾನ್ ಪ್ರಸ್ತಾಪಿಸಿದರು.

  ಕೊಕ್ಕರಕಲ್ ಬಳಿ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿ ತೆರೆದ ಚರಂಡಿಗೆ ಬಿಡುತ್ತಿದ್ದು, ಗದ್ದೆಯಲ್ಲಿ ನೀರು ಸಂಗ್ರಹವಾಗಿ ಪರಿಸರ ರೋಗದ ಭೀತಿ ಎದುರಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಯೋಗೀಶ್ ಕೋಟ್ಯಾನ್ ಒತ್ತಾಯಿಸಿದರು.

ಪಡುಬೈಲು ಬಳಿ ಉಪ್ಪು ನೀರಿನ ತಡೆಗೋಡೆ ಕಾಮಗಾರಿ ಅರ್ಧದಲ್ಲಿ ನಿಂತಿರುವ ಬಗ್ಗೆ ರಾಧಿಕಾ ಕೋಟ್ಯಾನ್ ಗಮನ ಸೆಳೆದರು.

ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ತ್ಯಾಜ್ಯದ ಚರಂಡಿಯಲ್ಲಿರುವ ಕುಡಿಯುವ ನೀರಿನ ಪೈಪನ್ನು ತೆರವುಗೊಳಿಸಿ, ಉದ್ಯಾನವನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಗಾಂಧಿ ಮೈದಾನದ ಬಳಿಯ  ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ಚರಂಡಿಯಲ್ಲಿ ಸಂಗ್ರಹವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಭೀಮಾ ಶಂಕರ್ ಒತ್ತಾಯಿಸಿದರು.

ನ. ಪಂ. ಸಿಬ್ಬಂದಿಗಳಿಗೆ  ಬೆದರಿಕೆ ಕರೆ ಬರುತ್ತಿದ್ದು, ತನಿಖೆ ನಡೆಸುವಂತೆ ಸದಸ್ಯ ಬಾಲಚಂದ್ರ ಕಾಮತ್ ಒತ್ತಾಯಿಸಿದರು.

ನಗರ ಪಂಚಾಯತ್ ಸದಸ್ಯರ ಆಯಾ ವಾರ್ಡ್ ನಲ್ಲಿ ಕಾಮಗಾರಿ ನಡೆಸುವಾಗ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯೆ ವಂದನಾ ಕಾಮತ್ ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿ ಮಧುಕರ್ ಸಮ್ಮತಿಸಿ ಸಂಬಂಧಪಟ್ಟ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಮಂಗಳೂರಿನಿಂದ ಮುಲ್ಕಿಗೆ ಬರುವ ತುಂಬೆ ಕುಡಿಯುವ ನೀರಿನ ಪಾಲುದಾರ ಹಳೆಯಂಗಡಿ ಗ್ರಾ ಪಂ. ಕುಡಿಯುವ ನೀರಿನ ಬಿಲ್ ಬಾಕಿ ಏನಾಯ್ತು? ಎಂದು ಮಂಜುನಾಥ ಕಂಬಾರ ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷ ಸತೀಶ್ ಅಂಚನ್ ಉತ್ತರಿಸಿ ಬಿಲ್ ಪಾವತಿ ಮಾಡುವಂತೆ ಪಂಚಾಯಿತಿಗೆ ನೋಟಿಸ್ ನೀಡಲಾಗಿದೆ ಎಂದರು.

ನ. ಪಂ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಬಗ್ಗೆ ಸಾಹಸ್ ಎನ್ ಜಿ ಒ ಸುದೀಪ್ ಕಿಣಿ ಮಾಹಿತಿ ನೀಡಿದರು.

ಮುಲ್ಕಿ ತಾಲೂಕು ಅಭಿವೃದ್ಧಿ ಬಗ್ಗೆ ಸಮಿತಿ ಅಧ್ಯಕ್ಷರಾದ ಹರೀಶ್ ಪುತ್ರನ್ ನೀಡಿದ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸಭೆಯಲ್ಲಿ 2025- 26 ನೇ ಸಾಲಿನ ಮುಂಗಡ ಆಯವ್ಯಯ ಪತ್ರ(ಬಜೆಟ್) ತಯಾರಿಸಲು ಸಲಹೆ ಸೂಚನೆ ನೀಡಲಾಯಿತು, ವಿಜಯಪುರ ಕಾಲೋನಿಯ ಡಾ. ಬಾಬು ಜಗಜೀವನ್ ರಾಮ್ ಗ್ರಂಥಾಲಯವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2