ಬೆಂಗಳೂರು : 2 ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆ, ಆರೋಗ್ಯ ಸಚಿವರಿಂದ ತುರ್ತು ಸಭೆ (Bengaluru: HMPV virus detected in 2 children, Health Minister holds emergency meeting)
ಸಾಂದರ್ಭಿಕ ಚಿತ್ರ
ಬೆಂಗಳೂರು : 2 ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆ, ಆರೋಗ್ಯ ಸಚಿವರಿಂದ ತುರ್ತು ಸಭೆ
(Bengaluru)ಬೆಂಗಳೂರು : ಬೆಂಗಳೂರು : 2 ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್‌ರವರು ಆರೋಗ್ಯ ಇಲಾಖೆಯ ತುರ್ತು ಸಭೆ ಕರೆದು ಸೋಂಕು ಹರಡದಂತೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಚೀನಾ ದೇಶದಲ್ಲಿ ಎಚ್‌ಎಂಪಿವಿ ಸೋಂಕು ಆರ್ಭಟಿಸುತ್ತಿರುವ ಬೆನ್ನಲ್ಲೆ ಬೆಂಗಳೂರು ನಗರದಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ 8 ತಿಂಗಳ ಹಾಗೂ 3 ತಿಂಗಳ ಮಗುವಿನಲ್ಲಿ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.
ಎಂಟು ತಿಂಗಳ ಮಗು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷೆ ವೇಳೆ ಎಚ್‌ಎಂಪಿವಿ ವೈರಸ್ ಇರುವುದು ಪತ್ತೆಯಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ೩ ತಿಂಗಳ ಹೆಣ್ಣು ಶಿಶುವಿಗೆ ಎಚ್‌ಎಂಪಿವಿ ವೈರಸ್ ಇರುವುದು ದೃಢಪಟ್ಟಿದೆ. ಆದರೆ, ಈ ಶಿಶುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಚ್‌ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯುಟೇಷನ್ ಆಗಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಯಾವ ರೀತಿಯಲ್ಲಿದೆ ಎಂಬುದೂ ಕೂಡ ತಿಳಿದು ಬಂದಿಲ್ಲ.
ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ಸಾಮಾನ್ಯ ವೈರಸ್ಸೇ ಅಥವಾ ಚೀನಾದ ಥಳಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಸಾಮಾನ್ಯ ಎಚ್‌ಎಂಪಿವಿ ವೈರಸ್ ಶೇ. ೦.78 ರಷ್ಟು ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ.
ವೈರಸ್ ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರು ವಿದೇಶ ಪ್ರಯಾಣ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ವೈರಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುತ್ತಿದೆ.
ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಗುವಿನಲ್ಲಿ ವೈರಸ್ ಪತ್ತೆಯಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮುನ್ನೆಚ್ಚೆರಿಕೆ
ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ.
ಏನಿದು ಎಚ್ಎಂಪಿವಿ?
ಪ್ರಸ್ತುತ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿರುವ ಎಚ್‌ಎಂಪಿವಿ ವೈರಸ್ ಹೊಸದೇನಲ್ಲ. ಇದನ್ನು ಮೊದಲು 2001 ರಲ್ಲಿ ಕಂಡು ಹಿಡಿಯಲಾಗಿದೆ ಎಂದು ಅಮೆರಿಕ ರೋಗನಿಯಂತ್ರಣ ಮತ್ತು ತಡೆ ಸೆಂಟರ್ ಈ ಕುರಿತು ಮಾಹಿತಿ ನೀಡಿದೆ. ಆದರೂ ಕೆಲವು ಪುರಾವೆಗಳು 1958 ರಿಂದಲೇ ವೈರಸ್ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿ ತಜ್ಞರು ವಿಶ್ಲೇಷಿಸಿದ್ದಾರೆ.
ಕೊರೊನಾ ವೈರಸ್ ಅಥವಾ ಕೋವಿಡ್-19 ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಸಾರ್ಸ್-ಕೋವಿ-2 ವೈರಸ್‌ನಿಂದ ಉಂಟಾಗುತ್ತದೆ. ಎಚ್‌ಎಂಪಿವಿ ವೈರಸ್ ಮತ್ತು ಕೊರೊನಾ ವೈರಸ್ ಕೆಲವು ರೀತಿಯಲ್ಲಿ ಹೋಲಿಕೆ ಇವೆ. ಉದಾಹರಣೆಗೆ ಹೇಳುವುದಾದರೆ ಎರಡು ವೈರಸ್‌ಗಳು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತದೆ. ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.
ಪ್ರಸ್ತುತ ಎಚ್‌ಎಂಪಿವಿ ವೈರಸ್ ಹರಡುವುದನ್ನು ನಿಯಂತ್ರಿಸಲು ಯಾವುದೇ ಲಸಿಕೆ ಇಲ್ಲ. ಈ ಬಗ್ಗೆ ಯಾವುದೇ ರೀತಿ ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.