ಮುಲ್ಕಿ ಚಿತ್ರಾಫು: ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು, ಬೆಳೆನಾಶ (Mulki Chitrapu: Salt water enters agricultural fields, crops destroyed)
ಮುಲ್ಕಿ ಚಿತ್ರಾಫು: ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು, ಬೆಳೆನಾಶ
(Mulki) ಮುಲ್ಕಿ: ನಗರ ಪಂಚಾಯತ್ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಗಡಿ ಭಾಗದ ಶೇಡಿಕಟ್ಟ ಬಳಿ ಹಳೆಯ ಅಣೆಕಟ್ಟಿಗೆ ಹಲಗೆ ಹಾಕದೆ ಕೃಷಿ ಪ್ರಧಾನ ಪ್ರದೇಶವಾದ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು, ಘಜನಿ, ಕಲ್ಸಂಕ, ಪಡುಬೈಲು, ವ್ಯಾಪ್ತಿಯ ಗದ್ದೆಯಲ್ಲಿ ಉಪ್ಪು ನೀರು ತುಂಬಿದ್ದು ಸುಮಾರು 500 ಎಕ್ರೆ ಕೃಷಿಗೆ ತೀವ್ರ ತೊಂದರೆಯಾಗಿದೆ.
ಉಪ್ಪು ನೀರು ಗದ್ದೆಗೆ ನುಗ್ಗಿದ್ದರಿಂದ ಎರಡನೇ ಬಾರಿ ಗದ್ದೆಯಲ್ಲಿ ಕೃಷಿ ಮಾಡಲು ತೀವ್ರ ತೊಂದರೆಯಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಬಾವಿಗೆ ಉಪ್ಪು ನೀರು ಸೇರುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೂ ಅಭಾವ ಎದುರಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಡುಪಣಂಬೂರು ಗ್ರಾಮ ಪಂಚಾಯತ್ ಹಾಗೂ ಮುಲ್ಕಿ ನಗರ ಪಂಚಾಯತ್ ಗಡಿಭಾಗದ ಶೇಡಿ ಕಟ್ಟ ಹಳೆಯ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕದೆ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಕೃಷಿಕರ ಪಾಡು ಹೇಳತೀರದ ಮಟ್ಟಿಗೆ ಇಳಿದಿದೆ.
ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯಿತಿಗೆ ಆಣೆಕಟ್ಟು ದುರಸ್ತಿ ಮಾಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ಸುಗಂಧಿ ಸಾಲ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.