ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು : ಬೊಮ್ಮಾಯಿ
ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡುವಲ್ಲಿ ಜನರಿಗೆ ದೋಖಾ ಮಾಡುವುದು ಮುಂದುವರೆಸಿದೆ. ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರೆಂಟಿ ನೀಡಿ ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ.
ರಾಜ್ಯ ಸರ್ಕಾರ ನೀಡುವ 170 ರೂ. ಗ್ರಾಮೀಣ ಮಹಿಳೆಯ ದಿನದ ಕೂಲಿಯ ಅರ್ಧದಷ್ಟು ಹಣವೂ ಆಗುವುದಿಲ್ಲ. ಸುಳ್ಳು ಗ್ಯಾರೆಂಟಿ ಗಳನ್ನು ಈಡೇರಿಸಲಾಗದೇ ಈಗ ಜನರಿಗೆ ದ್ರೋಹ ಮಾಡಲಾಗುತ್ತಿದೆ.
ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ. ಗಳಂತೆ ಹತ್ತು ಕೆಜಿಗೆ ತಗಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನರಿಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.