# Tags
#ಪ್ರಚಲಿತ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನಾ ದಿನಾಚರಣೆ (Foundation Day Celebration of Udupi Dist Working journalists Association)

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನಾ ದಿನಾಚರಣೆ

(Udupi) ಉಡುಪಿ, ಎ.12: ಪತ್ರಿಕೆಯಲ್ಲಿ ಲೇಖನ ಬಂದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದು ಹೆಚ್ಚಿನವರ ಭಾವನೆ. ಆದರೆ ಲೇಖನಗಳಿಂದ ಕೇವಲ ಜನಾಭಿಪ್ರಾಯ ಸಂಗ್ರಹ ಆಗುತ್ತದೆ ಹೊರತು ಸಮಸ್ಯೆ ಪರಿಹಾರ ಆಗುವುದಿಲ್ಲ. ಆ ಜನಾಭಿಪ್ರಾಯ ನಮ್ಮ ವ್ಯವಸ್ಥೆಗೆ ತಲುಪಿದರೆ ಮಾತ್ರ ಸಮಸ್ಯೆ ಪರಿಹಾರ ಆಗಲು ಸಾಧ್ಯ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ (DR Ravindranath Shanubhag) ಹೇಳಿದ್ದಾರೆ.

 ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಸಂಘದ ಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

 ನಾನು ಪತ್ರಿಕೆಯಲ್ಲಿ ಬರೆದ ಲೇಖನಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಆದರೆ ಈ ಕುರಿತು ಸಂಬಂಧಪಟ್ಟ ಸಚಿವರನ್ನು ಮಾತನಾಡಿದರೂ ಸಮಸ್ಯೆಗೆ ಪರಿಹಾರ ದೊರೆಯುತ್ತಿರಲಿಲ್ಲ. ಅದಕ್ಕಾಗಿ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವನ್ನು ರೂಪಿಸಿದೆ. ಅದರಂತೆ ಈ ಲೇಖನಕ್ಕೆ ಸಂಬಂಧಿಸಿ ಜನರು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದರು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ತಂದುಕೊಟ್ಟರು. ಹೀಗೆ ನಾನು ಮಾಡಿದ ಪ್ರಯೋಗದಿಂದ ಸಾವಿರಾರು ಸಮಸ್ಯೆಗಳು ಪರಿಹಾರವಾಗಿದ್ದವು ಎಂದರು.

 ಜನರಲ್ಲಿ ಜನಾಭಿಪ್ರಾಯ ರೂಪಿಸದರೆ ಸಾಲದು, ಆ ಜನಾಭಿಪ್ರಾಯ ಯಾರಿಗೂ ಹೇಗೆ ತಲುಪಬೇಕೋ ಹಾಗೆ ತಲುಪಿದರೆ ಮಾತ್ರ ಸಮಸ್ಯೆ ಪರಿಹಾರ ಆಗುತ್ತದೆ. ಇದರಿಂದ ಪ್ರಜಾಪ್ರಭುತ್ವದಲ್ಲಿ ಜನಾದೇಶವೇ ಮುಖ್ಯ ಎಂಬುದನ್ನು ನಾನು ಕಂಡುಕೊಂಡೆ. ಪತ್ರಿಕೋದ್ಯಮದಲ್ಲಿ ಈ ಪ್ರಯೋಗ ಯಶಸ್ವಿಯಾಯಿತು ಎಂದು ಅವರು ತಿಳಿಸಿದರು.

 ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಪ್ರಭಾ ವಾರ ಪತ್ರಿಕೆಯ ಸಂಪಾದಕ ಯು.ಎಸ್. ಶೆಣೈ ಸ್ಥಾಪನಾ ದಿನದ ಬಗ್ಗೆ ಮಾತನಾಡಿ, ಪತ್ರಕರ್ತರ ಸಂಘ ಸ್ಥಾಪನೆಯಿಂದ ಪತ್ರಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯವಾಯಿತು. ಯಾವುದೇ ಸುದ್ದಿ ಮಾಡುವಾಗ ಅದಕ್ಕೆ ಸಂಬಂಧಿಸಿದ ದಾಖಲೆ ಇದ್ದರೆ ಪತ್ರಕರ್ತರು ಯಾರಿಗೂ ಭಯಪಡಬೇಕಾದ ಅಗತ್ಯ ಇಲ್ಲ. ಪತ್ರಕರ್ತರು ಸುಳ್ಳು, ಪ್ರಚೋದನಕಾರಿ ಸುದ್ದಿಗಳ ಬಗ್ಗೆ ಎಚ್ಚರವಹಿಸಿ ಸುದ್ದಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

1998ರಿಂದ ಈವರೆಗೆ ಸೇವೆ ಸಲ್ಲಿಸಿರುವ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನಾಮಫಲಕವನ್ನು ಅನಾವರಣಗೊಳಿಸಿದ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ಆಡಳಿತ ನಿರ್ದೇಶಕ ರವೀಂದ್ರ ಕೆ.ಶೆಟ್ಟಿ (Ravindra K Shetty) ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಇದ್ದರೆ ಅದರಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ನಿಜವಾದ ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಎಲ್ಲೂ ಸಿಗುವುದಿಲ್ಲ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಸದಸ್ಯರಾದ ಹಿರಿಯ ಪತ್ರಕರ್ತ ಸುಭಾಶ್ಚಂದ್ರ ವಾಗ್ಳೆ (Subashchandra Wagle) ಅವರಿಗೆ ಸ್ಥಾಪನಾ ದಿನದ ಸನ್ಮಾನವನ್ನು ನೆರವೇರಿಸಲಾಯಿತು.

 ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು (Rajesh Shetty Alevuru) ವಹಿಸಿದ್ದರು.

 ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ (Mohd Sharif karkala), ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನ ಬೈಲು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.

 ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2