ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ (Padubidri: Jeernoddhara Samiti counter inaugurated)
ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ
(Padubidri) ಪಡುಬಿದ್ರಿ, ಜ. 21: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂಕಲ್ಪಗಳಲ್ಲಿ ಶ್ರೀ ದೇವಸ್ಥಾನದ ಎಲ್ಲಾ ಭಕ್ತರೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜೀರ್ಣೊದ್ಧಾರ ಸಮಿತಿಯ ಸೇವಾ ಕೌಂಟರ್ ಒಂದನ್ನು ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರವರು ಉದ್ಘಾಟಿಸಿದರು.
ಹನಿಗೂಡಿದರೆ ಹಳ್ಳ ಎಂಬ ರೀತಿಯಲ್ಲಿ ದೇವಸ್ಥಾನದ ಪುನರ್ ನಿರ್ಮಾಣವೂ ಇಲ್ಲಿನ ಎಲ್ಲಾ ಭಕ್ತರಿಂದಲೇ ನಡೆಯಬೇಕು. ಹಾಗಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸಮಷ್ಟಿಯದ್ದಾಗಬೇಕು ಮತ್ತು ಇಲ್ಲಿನ ಸಕಲ ಭಕ್ತರೂ ಸತ್ಕಾರ್ಯದಲ್ಲಿ ತಮ್ಮ ದೇಣಿಗೆಯನ್ನು ನೀಡುವ ದೃಷ್ಟಿಯಲ್ಲಿ ಇದನ್ನು ತೆರೆಯಲಾಗಿದೆ. ಎಲ್ಲರೂ ಈ ಮಹತ್ಕಾರ್ಯದಲ್ಲಿ ನೆರವಾಗಬೇಕು.
ಸುಮಾರು 30ಕೋಟಿ ರೂ. ಗಳ ಯೋಜನಾ ವೆಚ್ಚದೊಂದಿಗೆ ನವೀಕರಣ, ದೇಗುಲ ಪುನರ್ ನಿರ್ಮಾಣ ಕಾರ್ಯಗಳು ನಡೆಯಲಿದ್ದು, ಸೀಮೆಯ ಭಕ್ತರು ಸಹಕರಿಸಬೇಕು ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯಗಳ ರೂವಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಎಂಆರ್‌ಜಿ ಸಮೂಹ ಉದ್ಯಮ ಸಂಸ್ಥೆಗಳ ಸಿಎಂಡಿ, ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅನುವಂಶಿಕ ಆಡಳಿತ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಶ್ರೀ ಕ್ಷೇತ್ರದ ಅರ್ಚಕರಾದ ಪದ್ಮನಾಭ ಭಟ್, ವೈ. ಗುರುರಾಜ ಭಟ್, ವೈ. ಎನ್. ರಾಮಚಂದ್ರ ರಾವ್, ಕೃಷ್ಣಾಪುರ ಶಾಖಾ ಮಠದ ಯಾದವೇಂದ್ರ ಉಪಾಧ್ಯಾಯ ಮತ್ತಿತರಿದ್ದರು.