ಕಟಪಾಡಿ: ಎಕ್ಸ್‌ಪ್ರೆಸ್ ಬಸ್ ಢಿಕ್ಕಿ, ವ್ಯಕ್ತಿ ಸಾವು (Katapadi Express Bus collided: one person died)
ಕಟಪಾಡಿ: ಎಕ್ಸ್‌ಪ್ರೆಸ್ ಬಸ್ ಢಿಕ್ಕಿ, ವ್ಯಕ್ತಿ ಸಾವು
(Katapadi) ಕಟಪಾಡಿ, ಎ. 7: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟದ ಬಳಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಬ್ಯಾಂಡ್ ವಾದಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ಮೂಲತಃ ಉಡುಪಿ ಕೆಮ್ಮಣ್ಣು ತೋನ್ಸೆ ಮೂಲದ, ಕಟಪಾಡಿ ತೇಕಲತೋಟದ ಮನೆಯೊಂದರಲ್ಲಿ ಬಾಡಿಗೆ ವಾಸವಿದ್ದ ಕುಮಾರ್ (55) ಮೃತ ವ್ಯಕ್ತಿ. ವಿವಾಹಿತನಾಗಿದ್ದ ಅವರು ಪತ್ನಿ ಮತ್ತು ವಿದೇಶದಲ್ಲಿರುವ ಮಗಳನ್ನು ಅಗಲಿದ್ದಾರೆ.
ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯ ಪಶ್ಚಿಮ ಬದಿಯಲ್ಲಿ ರಿಕ್ಷಾದಲ್ಲಿ ಬಂದಿಳಿದು ಹೆದ್ದಾರಿಯ ಮತ್ತೊಂದು ಮಗ್ಗುಲಿನಲ್ಲಿರುವ ತನ್ನ ಬಾಡಿಗೆ ಮನೆಯತ್ತ ಹೋಗುತ್ತಿದ್ದಾಗ, ಎಕ್ ಪ್ರೆಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಬಸ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಗಾಯಾಳುವಿನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅಪಘಾತದ ಬಳಿಕ ಬಸ್ ಡಿವೈಡರ್ ಮೇಲೇರಿ ನಿಂತಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ವೃತ್ಯಯಗೊಂಡು ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕೆ ಧಾವಿಸಿದ ಕಟಪಾಡಿ ಉಪಠಾಣೆಯ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.